ಮಕ್ಕಳ ಕಳ್ಳರೆಂದು ಶಂಕಿಸಿ ಇಬ್ಬರನ್ನು ಥಳಿಸಿ ಹತ್ಯೆಗೈದರು

Update: 2018-06-09 16:01 GMT

ಗುವಾಹಟಿ, ಜೂ.9: ಮಕ್ಕಳ ಅಪಹರಣಕಾರರೆಂದು ತಪ್ಪಾಗಿ ಭಾವಿಸಿ, 30ರ ಹರೆಯದ ಇಬ್ಬರು ವ್ಯಕ್ತಿಗಳನ್ನು ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿ ಹತ್ಯೆಗೈದ ಬರ್ಬರ ಘಟನೆ ಗುವಾಹಟಿ ಸಮೀಪದ ಗ್ರಾಮವೊಂದರಲ್ಲಿ ನಡೆದಿದೆ.

ಅಸ್ಸಾಂನ ಪಶ್ಚಿಮ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಮಕ್ಕಳ ಅಪಹರಣಕಾರರು ಅಡ್ಡಾಡುತ್ತಿದ್ದಾರೆಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಬಳಿಕ ಗುವಾಹಟಿ ಹಾಗೂ ಆಸುಪಾಸಿನ ಗ್ರಾಮಗಳಲ್ಲಿ ಆತಂಕದ ವಾತಾವರಣ ನೆಲೆಸಿತ್ತು. ಶುಕ್ರವಾರ ಸಂಜೆ ಪಂಜಾರಿ ಕಚಾರಿ ಗ್ರಾಮದಲ್ಲಿ ಅಭಿಜಿತ್ ನಾಥ್ ಹಾಗೂ ನೀಲೊತ್ಪಲ್ ದಾಸ್ ಎಂಬವರು ಡೊಕೊಮೊಕಾಗೆ ಪ್ರಯಾಣಿಸುತ್ತಿದ್ದ ಅವರನ್ನು ಸ್ಥಳೀಯರು ಮಕ್ಕಳ ಅಪಹರಣಕಾರರೆಂದು ಶಂಕಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಇವರಿಬ್ಬರೂ ದೆನಾಗಾಂವ್‌ನಿಂದ 10 ಕಿ.ಮೀ. ದೂರದಲ್ಲಿರುವ ಕಾತಿಯಾಂಗ್ಲೊ ಜಲಪಾತವನ್ನು ವೀಕ್ಷಿಸಲು ಎಸ್‌ಯುವಿ ವಾಹನದಲ್ಲಿ ತೆರಳುತ್ತಿದ್ದರೆನ್ನಲಾಗಿದೆ. ಸಂಜೆ 8:00 ಗಂಟೆಯ ವೇಳೆಗೆ ಸ್ಥಳೀಯರು ಅವರನ್ನು ಕಾರಿನಿಂದ ಹೊರಗೆಳೆದು ಮಾರಣಾಂತಿಕವಾಗಿ ಥಳಿಸಿದ್ದರು. ಇಬ್ಬರೂ ಪ್ರಾಣಭಯದಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗುಂಪು ಅವರನ್ನು ಕಟ್ಟಿ ಹಾಕಿ ಬರ್ಬರವಾಗಿ ಥಳಿಸಿತ್ತು. ಆಗ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

 ಹಲ್ಲೆ ನಡೆಸಿದವರು ಘಟನೆಯ ವಿಡಿಯೋವನ್ನು ಕೂಡಾ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದಾರೆ. ನಿಲೋತ್ಪಲ್ ದಾಸ್, ತಾನೂ ಕೂಡಾ ಅಸ್ಸಾಮಿ ನವನಾಗಿದ್ದು, ತನ್ನ ಮೇಲೆ ಹಲ್ಲೆ ನಡೆಸದಂತೆ ಪರಿಪರಿಯಾಗಿ ಬೇಡುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ಈ ಬರ್ಬರ ಘಟನೆಯನ್ನು ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ತೀವ್ರವಾಗಿ ಖಂಡಿಸಿದ್ದಾರೆ ಹಾಗೂ ಈ ಬಗ್ಗೆ ತನಿಖೆ ನಡೆಸುವಂತೆ ಅಸ್ಸಾಂನ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News