×
Ad

ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ಎಂಟು ರಾಜ್ಯಗಳು, ನಾಲ್ಕು ಕೇಂದ್ರಾಡಳಿತಗಳಿಂದ ಒಪ್ಪಿಗೆ

Update: 2018-06-09 21:32 IST

ಹೊಸದಿಲ್ಲಿ,ಜೂನ್9: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ರಾಷ್ಟ್ರೀಯ ಆರೋಗ್ಯ ಸುರಕ್ಷತಾ ಯೋಜನೆಯಾದ ಆಯುಷ್ಮಾನ್ ಭಾರತ್ ಅನ್ನು ಅನುಷ್ಠಾನಗೊಳಿಸಲು ಎಂಟು ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತಗಳು ಸಮ್ಮತಿಯನ್ನು ಸೂಚಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಯೋಜನೆಯನ್ವಯ ಹತ್ತು ಕೋಟಿ ಬಡ ಕುಟುಂಬಗಳಿಗೆ ವಾರ್ಷಿಕ ಐದು ಲಕ್ಷ ರೂ. ಆರೋಗ್ಯ ರಕ್ಷಣೆ ದೊರಕಲಿದೆ. ದಿಲ್ಲಿ, ಒಡಿಶಾ, ಪಂಜಾಬ್ ಮತ್ತು ಪಶ್ಚಿಮ ಬಂಗಾಳ ಮಾತ್ರ ಈ ಯೋಜನೆಯನ್ನು ಜಾರಿ ಮಾಡುವ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಈ ರಾಜ್ಯಗಳ ಜೊತೆ ಮಾತುಕತೆ ಜಾರಿಯಲ್ಲಿದೆ ಎಂದು ಸಚಿವಾಲಯ ತಿಳಿಸಿದೆ.

ಉಳಿದಂತೆ, ಹಿಮಾಚಲ ಪ್ರದೇಶ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರಾಖಂಡ, ಚಂಡಿಗಡ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಆಂಧ್ರ ಪ್ರದೇಶ, ಕೇರಳ, ಅಂಡಮಾನ್ ಮತ್ತು ನಿಕೊಬಾರ್ ಹಾಗೂ ತಮಿಳುನಾಡು ಈ ಯೋಜನೆಯನ್ನು ಜಾರಿ ಮಾಡುವ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಿವೆ. ಆಗಸ್ಟ್ ಹದಿನೈದರಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಭಾರತ ಜಗತ್ತಿನ ಎರಡನೇ ಅತೀಹೆಚ್ಚು ಜನಸಂಖ್ಯೆ ಹೊಂದಿರುವ ಕಾರಣ ಆಯುಷ್ಮಾನ್ ಭಾರತ ಯೋಜನೆಯು ಜಗತ್ತಿನ ಬೃಹತ್ ಆರೋಗ್ಯ ಸೇವಾ ಕಾರ್ಯಕ್ರಮವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ತಿಳಿಸಿದ್ದಾರೆ. ಈ ಯೋಜನೆಯನ್ವಯ ಹತ್ತು ಕೋಟಿ ಬಡ ಕುಟುಂಬಗಳಿಗೆ ವಾರ್ಷಿಕ ಐದು ಲಕ್ಷ ರೂ. ಆರೋಗ್ಯವಿಮೆ ದೊರೆಯಲಿದೆ. ಈ ಯೋಜನೆಯಲ್ಲಿ ಬಡ ಗ್ರಾಮೀಣ ಕುಟುಂಬಗಳು ಮತ್ತು ನಗರ ಪ್ರದೇಶದ ಕಾರ್ಮಿಕ ಕುಟುಂಬಗಳನ್ನು ಗುರಿ ಮಾಡಲಾಗಿದೆ. ಈ ಯೋಜನೆಯ ಲಾಭವನ್ನು ದೇಶದ ಯಾವ ಮೂಲೆಯಲ್ಲೂ ಪಡೆಯಬಹುದಾಗಿದೆ. ಇದರಿಂದ ಆರೋಗ್ಯ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆರ್ಥಿಕ ಹೊರೆಯಾಗುವುದು ತಪ್ಪಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News