ಕವನಗಳ ರಂಗರೂಪ ‘ಆಧುನಿಕ ವಿಕಾರ’: ರಘುನಂದನ

Update: 2018-06-09 16:11 GMT

ಉಡುಪಿ, ಜೂ.9: ಅಡಿಗರ ‘ಭೂಮಿಗೀತ’ದಂಥ ಕವನಗಳು ಓದಲು, ಮನನ ಮಾಡಲು ಇರುವುದೇ ಹೊರತು, ಅವುಗಳನ್ನು ರಂಗದ ಮೇಲೆ ಆಡಲು ಬರುವುದಿಲ್ಲ. ಇಂಥ ರಂಗರೂಪಗಳು ‘ಆಧುನಿಕ ವಿಕಾರ’ ಎಂದು ಖ್ಯಾತ ರಂಗ ನಿರ್ದೇಶಕ ರಘುನಂದನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಹಾಗೂ ರಥಬೀದಿ ಗೆಳೆಯರು ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಆರ್‌ಆರ್‌ಸಿಯ ಧ್ವನ್ಯಾ ಲೋಕದಲ್ಲಿ ಇಂದು ನಡೆದ ‘ಕಾವ್ಯ, ನಾಟ್ಯ, ಪ್ರತ್ಯಭಿಜ್ಞಾನ ಒಂದು ಜಿಜ್ಞಾಸೆ’ ವಿಷಯದ ಕುರಿತ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಪ್ರಸಿದ್ಧ ಕವನಗಳನ್ನು ತೆಗೆದುಕೊಂಡು ಅವುಗಳನ್ನು ರಂಗದಲ್ಲಿ ಆಡುವ ಇಂಥ ವಿಕಾರಗಳು 20-30 ವರ್ಷಗಳಿಂದ ಕಾಣಿಸಿಕೊಂಡಿದೆ. ಓದಲು ಬರೆದ ಕವನಗಳು, ಪದ್ಯಗಳು ರಂಗಸ್ಥಳದಲ್ಲಿ ಆಡಲು ಬರುವುದಿಲ್ಲ. ಸಮಸ್ಯೆ ಏನೆಂದರೆ ಈಗ ಭೂಮಿಗೀತದಂಥ ಕವನ, ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಅಂಥ ಕೃತಿಗಳನ್ನು ರಂಗಕ್ಕಿಳಿಸುವುದು ‘ದರಿದ್ರ’. ಆದರೆ ಅವರಿಗೆ ಈ ಸ್ವಾತಂತ್ರ ವಂತೂ ಇದ್ದೇ ಇದೆ ಎಂದು ರಘುನಂದನ್ ನುಡಿದರು.

ನಾಟ್ಯ ಶಾಸ್ತ್ರ ಎಂಬುದು ರಂಗಭೂಮಿಗೆ ಸಂಬಂಧಿಸಿದ್ದು, 2000 ವರ್ಷಗಳಿಂದ ಇರುವಂತದ್ದು. ಯಕ್ಷಗಾನವೂ ಒಂದು ನಾಟ್ಯವೇ. ನಾಟ್ಯ ಎಂಬುದು ನಿಜವಾಗಿಯೂ ರಂಗಭೂಮಿ.ನಾಟ್ಯದಲ್ಲಿ ನೃತ್ಯವೂ ಇದೆ, ಕಾವ್ಯವೂ ಇದೆ ಎಂದವರು ವಿವರಿಸಿದರು.

ರಥಬೀದಿ ಗೆಳೆಯರು ಉಡುಪಿ ಇದರ ಅಧ್ಯಕ್ಷ ಪ್ರೊ.ಮುರಳೀಧರ ಉಪಾಧ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾದೇಶಿಕ ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ಅತಿಥಿಗಳನ್ನು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News