×
Ad

'ಮದುವೆ ಸಭಾಂಗಣಕ್ಕೆ ಜಿಎಸ್‌ಟಿ ತಗ್ಗಿಸಿ, ಉದ್ಯಮಿಗಳಿಗೆ ವಿಮೆ ನೀಡಿ'

Update: 2018-06-09 22:04 IST

ಉಡುಪಿ, ಜೂ.9: ಜಿಎಸ್‌ಟಿ ನೊಂದಾವಣೆಗೊಂಡ ಉದ್ಯಮಿಗಳಿಗೆ ಜೀವ ವಿಮೆಯನ್ನು ನೀಡಬೇಕು ಹಾಗೂ ಮದುವೆ ಸಭಾಂಗಣಕ್ಕೆ ಜಿಎಸ್‌ಟಿ ಕಡಿತ ಗೊಳಿಸಬೇಕೆಂದು ಶನಿವಾರ ಇಂದ್ರಾಳಿಯಲ್ಲಿರುವ ಉಡುಪಿ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಕಚೇರಿಯಲ್ಲಿ ಉಡುಪಿ ಶಾಸಕ ರಘುಪತಿ ಭಟ್ ಜೊತೆ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಉದ್ಯಮಿಗಳು ಆಗ್ರಹಿಸಿದರು.

ಉಡುಪಿಯಲ್ಲಿ ಸುಮಾರು 8 ಸಾವಿರ ಉದ್ಯಮಿಗಳು ಜಿಎಸ್‌ಟಿ ನೊಂದಾಣೆ ಮಾಡಿಕೊಂಡಿದ್ದು, ಇವರಿಗೆ ಯಾವುದೇ ಭದ್ರತೆ ಇಲ್ಲವಾಗಿದೆ. ಆದುದರಿಂದ ಉದ್ಯಮಿದಾರರ ಕುಟುಂಬಕ್ಕೆ 10 ಲಕ್ಷ ರೂ. ಜೀವವಿಮೆ ನೀಡಬೇಕು ಎಂದು ಛೇಂಬರ್ ಆ್ ಕಾಮರ್ಸ್‌ನ ಅಧ್ಯಕ್ಷ ಶ್ರೀಕೃಷ್ಣ ರಾವ್ ಕೊಡಂಚ ಮನವಿ ಮಾಡಿದರು.

ಹೋಟೆಲ್ ಉದ್ಯಮಕ್ಕೆ ಕಡಿತಗೊಳಿಸಿರುವ ಜಿಎಸ್‌ಟಿಯನ್ನು ಮದುವೆ ಸಭಾಂಗಣಕ್ಕೆ ಅನ್ವಯವಾಗುವಂತೆ ಮಾಡಬೇಕು. ಆದಾಯ ತೆರಿಗೆ ಅಧಿಕಾರಿ ಗಳು ಉದ್ಯಮಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಕ ಭರತ್ ಶೆಟ್ಟಿ ಒತ್ತಾಯಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ರಘುಪತಿ ಭಟ್, ಜಿಎಸ್‌ಟಿ, ರಾಷ್ಟ್ರೀಯ ಹೆದ್ದಾರಿ, ಐಟಿಗೆ ಸಂಬಂಧಿಸಿದ ಸಲಹೆಗಳನ್ನು ಕೇಂದ್ರ ಸರಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಉಡುಪಿ ಕಿನ್ನಿಮುಲ್ಕಿಯಲ್ಲಿರುವ ಸ್ವಾಗತ ಗೋಪುರದಲ್ಲಿ ಪರಶುರಾಮ, ಆಚಾರ್ಯ ಮಧ್ವರು, ಶ್ರೀಕೃಷ್ಣನ ಮೂರ್ತಿ ಸ್ಥಾಪಿಸಬೇಕು ಜತೆ ಕಾರ್ಯದರ್ಶಿ ಡಾ.ವಿಜಯೇಂದ್ರ ಮನವಿ ಮಾಡಿದರು. ಈ ಸಂಬಂಧ ಮನವಿ ನೀಡಿದರೆ ನಗರಸಭೆ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲು ಪ್ರಯತ್ನ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಉಡುಪಿ ಛೇಂಬರ್ ಆ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಅಧ್ಯಕ್ಷ ಶ್ರೀಕೃಷ್ಣ ರಾವ್ ಕೊಡಂಚ, ಕಾರ್ಯದರ್ಶಿ ನಟರಾಜ ಪ್ರಭು, ಕೋಶಾಧಿಕಾರಿ ರಂಜಿತ್ ಪಿ.ಎಸ್., ಜತೆ ಕಾರ್ಯದರ್ಶಿ ಗಣೇಶ್ ಶೆಣೈ ಉಪಸ್ಥಿತರಿದ್ದರು. ಲಕ್ಷ್ಮೀಕಾಂತ ಬೆಸ್ಕೂಲ್ ವಂದಿಸಿದರು. ಡಾ.ವಿಜಯೇಂದ್ರ ಕಾರ್ಯಕ್ರಮ ನಿರೂಪಿಸಿದರು.

ಟೋಲ್ ಫ್ರೀ ಭಾರತ: ರಘುಪತಿ ಭಟ್
ಕೇಂದ್ರ ಸರಕಾರ ಇಡೀ ದೇಶದಲ್ಲಿ ಟೋಲ್ ಸಂಗ್ರಹ ಕೇಂದ್ರಗಳನ್ನು ತೆರವು ಗೊಳಿಸಿ ಟೋಲ್ ಫ್ರೀ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ. ಇದರ ಬದಲು ಒಂದೇ ಬಾರಿಗೆ ಟೋಲ್ ಹಣವನ್ನು ಪಡೆದುಕೊಳ್ಳಲಾಗುತ್ತದೆ. ಇದರಿಂದ ವಾಹನಗಳ ಇಂಧನ ಹಾಗೂ ಸಮಯ ಉಳಿತಾಯವಾಗಲಿದೆ ಎಂದು ಶಾಸಕ ಕೆ.ರಘುಪತಿ ಭಟ್, ಉದ್ಯಮಿ ರಂಜನ್ ಕಲ್ಕೂರ್‌ರ ಪ್ರಶ್ನೆಗೆ ಉತ್ತರಿಸಿದರು.

ಈ ಸಂಬಂಧ ಕೇಂದ್ರ ಸರಕಾರ ಈಗಾಗಲೇ ಅಲಹಬಾದ್‌ನಲ್ಲಿ ಸಭೆ ನಡೆಸಿದ್ದು, ಹೆಚ್ಚುವರಿ ತೆರಿಗೆಯನ್ನು ಒಮ್ಮೆಗೆ ಭರಿಸುವ ಆಲೋಚನೆಯಲ್ಲಿದೆ. ಇದಕ್ಕೆ ಆಲ್ ಇಂಡಿಯಾ ಮೋಟಾರ್ ಟ್ರಾನ್‌‌ಸೆೆರ್ಟ್ ಕಾಂಗ್ರೆಸ್ ಕೂಡ ಒಪ್ಪಿಗೆ ಸೂಚಿಸಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News