ಇಂದು ಭಾರತ-ಕೀನ್ಯ ಫೈನಲ್

Update: 2018-06-09 18:31 GMT

ಮುಂಬೈ, ಜೂ.9: ಇಂಟರ್‌ಕಾಂಟಿನೆಂಟಲ್ ಕಪ್‌ನ ಫೈನಲ್ ಪಂದ್ಯ ರವಿವಾರ ಇಲ್ಲಿ ನಡೆಯಲಿದ್ದು ಸುನೀಲ್ ಚೆಟ್ರಿ ನೇತೃತ್ವದ ಆತಿಥೇಯ ಭಾರತ ಫುಟ್ಬಾಲ್ ತಂಡ ಕೀನ್ಯವನ್ನು ಎದುರಿಸಲಿದೆ.

ವಿಶ್ವದ ಸಕ್ರಿಯ ಮೂರನೇ ಗರಿಷ್ಠ ಗೋಲ್‌ಸ್ಕೋರರ್ ಎನಿಸಿಕೊಂಡಿರುವ ಚೆಟ್ರಿ ಟೂರ್ನಿಯಲ್ಲಿ ಆಡಿರುವ ಮೂರೂ ಪಂದ್ಯಗಳಲ್ಲಿ ಗೋಲು ಬಾರಿಸಿದ್ದಾರೆ. ಇದರಲ್ಲಿ ಚೈನೀಸ್ ತೈಪೆ ವಿರುದ್ಧ್ದ ಹ್ಯಾಟ್ರಿಕ್ ಗೋಲು ಕೂಡ ಸೇರಿದೆ. ಭಾರತ ತಂಡ ಈ ಟೂರ್ನಿಯನ್ನು ಮುಂದಿನ ವರ್ಷ ಜನವರಿಯಲ್ಲಿ ನಡೆಯುವ ಎಎಫ್‌ಸಿ ಏಶ್ಯನ್ ಕಪ್‌ಗೆ ಪೂರ್ವತಯಾರಿ ಪಂದ್ಯವೆಂದು ಪರಿಗಣಿಸಿದೆ. ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿದರೆ ಭಾರತದ ಆತ್ಮವಿಶ್ವಾಸ ಹೆಚ್ಚಾಗಲಿದೆ.

ಮುಂಬೈ ಫುಟ್ಬಾಲ್ ಅರೆನಾದಲ್ಲಿ ನಡೆದ ಲೀಗ್ ಹಂತದ ಪಂದ್ಯದಲ್ಲಿ ಭಾರತ ತಂಡ ಕೀನ್ಯವನ್ನು 3-0 ಅಂತರದಿಂದ ಮಣಿಸಿತ್ತು. ಕೀನ್ಯ ಎದುರಿನ ಪಂದ್ಯ ಚೆಟ್ರಿ ಪಾಲಿಗೆ 100ನೇ ಅಂತರ್‌ರಾಷ್ಟ್ರೀಯ ಪಂದ್ಯವಾಗಿತ್ತು. ಆ ಪಂದ್ಯದಲ್ಲಿ ಅವಳಿ ಗೋಲು ಬಾರಿಸಿದ್ದ ಚೆಟ್ರಿ ಸ್ಮರಣೀಯ ಪ್ರದರ್ಶನ ನೀಡಿದ್ದರು. ಚೆಟ್ರಿ ಫೈನಲ್ ಪಂದ್ಯದಲ್ಲಿ ಆಫ್ರಿಕ ತಂಡ ಕೀನ್ಯ ವಿರುದ್ಧ ಮತ್ತೊಮ್ಮೆ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ. ಫೈನಲ್ ಪಂದ್ಯದ ಎಲ್ಲ ಟಿಕೆಟ್‌ಗಳು ಮಾರಾಟವಾಗಿವೆ ಎಂದು ಆಯೋಜಕರು ಹೇಳಿದ್ದಾರೆ.

ಭಾರತ ಟೂರ್ನಿಯುದ್ದಕ್ಕೂ ಆಕ್ರಮಣಕಾರಿ ಶೈಲಿಯ ಫುಟ್ಬಾಲ್ ಆಡಿತ್ತು. ಆದರೆ, ಸ್ಟೀಫನ್ಸ್ ಕಾಂಸ್ಟನ್‌ಟೈನ್ ಮಾರ್ಗದರ್ಶನದಲ್ಲಿ ಪಳಗಿರುವ ಭಾರತ ತಂಡ ಕೀನ್ಯವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ನ್ಯೂಝಿಲೆಂಡ್‌ನ್ನು 2-1 ಹಾಗೂ ಚೈನೀಸ್ ತೈಪೆ ತಂಡವನ್ನು 4-0 ಅಂತರದಿಂದ ಸೋಲಿಸಿದೆ.

ಈ ತನಕ 62 ಗೋಲುಗಳನ್ನು ಬಾರಿಸಿರುವ ಚೆಟ್ರಿ ಮೇಲೆ ಎಲ್ಲರ ಚಿತ್ತವಿದೆ. ಚೆಟ್ರಿ ಹಾಗೂ ಜೇಜೆ ಲಾಲ್‌ಪೆಕುಲ್ವಾ ಯಾವುದೇ ಡಿಫೆನ್ಸ್‌ಗೆ ಸವಾಲಾಗಬಲ್ಲರು. ಕೀನ್ಯ ಕೂಡ ಇದಕ್ಕೆ ಹೊರತಾಗಿಲ್ಲ. ಮಿಡ್‌ಫೀಲ್ಡರ್‌ಗಳಾದ ಉದಾಂತ್ ಸಿಂಗ್, ಅನಿರುದ್ಧ ಥಾಪ, ಪ್ರಣಯ್ ಹಲ್ದರ್ ಹಾಗೂ ಹಾಲಿಚರಣ್ ತಂಡಕ್ಕೆ ಆಸರೆಯಾಗಬಲ್ಲರು.

ಕಳೆದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಫೈನಲ್ ಪಂದ್ಯದಲ್ಲಿ ತಂಡಕ್ಕೆ ವಾಪಸಾಗಲಿದ್ದಾರೆ.

ಚೈನೀಸ್ ತೈಪೆ ತಂಡವನ್ನು ಭರ್ಜರಿಯಾಗಿ ಸೋಲಿಸಿರುವ ಕೀನ್ಯ ಆತ್ಮವಿಶ್ವಾಸವನ್ನು ಹೆಚ್ಚಿ ಸಿಕೊಂಡಿದೆ. ಲೀಗ್ ಹಂತದಲ್ಲಿ ಭಾರತ ವಿರುದ್ಧ ಹೀನಾಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಕೀನ್ಯ ಎದುರು ನೋಡುತ್ತಿದೆ.

ಪಂದ್ಯದ ಸಮಯ: ರಾತ್ರಿ 8:00 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News