ರಾಜಕಾಲುವೆಗಳ ಒತ್ತುವರಿ ತೆರವಿಗೆ ಆಗ್ರಹ: ಕೂಳೂರಿನಲ್ಲಿ ಡಿವೈಎಫ್‌ಐ ಧರಣಿ

Update: 2018-06-10 07:44 GMT

ಮಂಗಳೂರು, ಜೂ.10: ನಗರ ಹೊರವಲಯದ ಬಂಗ್ರ ಕೂಳೂರು ಸಮೀಪದ ಫೋರ್ತ್ ಮೇಲ್ ಬಳಿ ರಾಜ ಕಾಲುವೆಗಳನ್ನು ಉದ್ಯಮಿಗಳು ಒತ್ತುವರಿ ಮಾಡಿಕೊಂಡಿದ್ದು, ಶೀಘ್ರ ಅವುಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ರವಿವಾರ ಡಿವೈಎಫ್‌ಐ ಕೂಳೂರು-ಪಂಜಿಮೊಗರು ಘಟಕದ ವತಿಯಿಂದ ಧರಣಿ ನಡೆಯಿತು.

ಕಳೆದ ತಿಂಗಳಾಂತ್ಯದಲ್ಲಿ ಸುರಿದ ಭಾರೀ ಮಳೆಗೆ ಮಂಗಳೂರು ಮುಳುಗಡೆಗೆ ಈ ರಾಜಕಾಲುವೆಗಳ ಒತ್ತುವರಿಯೇ ಕಾರಣ. ಉದ್ಯಮಿಗಳು, ಬಿಲ್ಡರ್‌ಗಳು ಇವುಗಳನ್ನು ಒತ್ತುವರಿ ಮಾಡುವಾಗ ಯಾವುದೇ ಕ್ರಮ ಕೈಗೊಳ್ಳದ ಸರಕಾರಿ ಅಧಿಕಾರಿಗಳು ಅನಾಹುತ ಉಂಟಾದ ಬಳಿಕ ತಮ್ಮ ಮೇಲೆ ಟೀಕೆಗಳ ಸುರಿಮಳೆ ಬಿದ್ದು ಎಚ್ಚೆತ್ತುಕೊಳ್ಳುತ್ತಾರೆ. ಒತ್ತುವರಿ ಸಂದರ್ಭದಲ್ಲೇ ಎಚ್ಚೆತ್ತುಕೊಂಡಿದ್ದರೆ ಮಂಗಳೂರಿನಲ್ಲಿ ಇಂದು ಸಮಸ್ಯೆಗಳು ಈ ರೀತಿಯಾಗಿ ಬಿಗಡಾಯಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಧರಣಿನಿರತರನ್ನು ಉದ್ದೇಶಿಸಿ ಮಾತನಾಡಿದ ಕಾರ್ಪೊರೇಟರ್ ದಯಾನಂದ ಶೆಟ್ಟಿ ಹೇಳಿದರು.

ಅಧಿಕಾರಿಗಳು ಯಾವುದೇ ಆಮಿಷಗಳಿಗೆ ಒಳಗಾಗಬಾರದು. ಕಾನೂನಿನ ಅನ್ವಯ ರಾಜ ಕಾಲುವೆಗಳನ್ನು ಒತ್ತುವರಿ ಮಾಡಬೇಕು. ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಮಗ್ರ ಯೋಜನೆಯೊಂದನ್ನು ರೂಪಿಸಬೇಕು. ಒತ್ತುವರಿ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ದಯಾನಂದ ಶೆಟ್ಟಿ ಒತ್ತಾಯಿಸಿದರು.

ಧರಣಿಯಲ್ಲಿ ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಮುಖಂಡರಾದ ಸಂತೋಷ್ ಬಜಾಲ್, ಅನಿಲ ಡಿಸೋಜ, ಚರಣ್ ಶೆಟ್ಟಿ, ಇಬ್ರಾಹೀಂ ಖಲೀಲ್, ಮುಸ್ತಫಾ ಅಂಗರಗುಂಡಿ, ಸ್ಯಾಮುವೆಲ್ ಟೈಟಸ್, ಅಶೋಕ್ ಶ್ರೀಯಾನ್, ಸೌಮ್ಯಾ ಪಂಜಿಮೊಗರು ಮತ್ತಿತರರು ಪಾಲ್ಗೊಂಡಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News