×
Ad

ಬಂಟ್ವಾಳದಲ್ಲಿ ತಲವಾರು ದಾಳಿ: ಇಬ್ಬರು ಆಸ್ಪತ್ರೆಗೆ ದಾಖಲು

Update: 2018-06-11 15:58 IST

ಬಂಟ್ವಾಳ, ಜೂ. 11: ತುಳು ಚಲನಚಿತ್ರ ನಟನೋರ್ವನ ನೇತೃತ್ವದ ತಂಡವೊಂದು ಬಿಜೆಪಿ ಕಾರ್ಯಕರ್ತರ ಮೇಲೆ ತಲವಾರು ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ ಎನ್ನಲಾದ ಘಟನೆ ಬಂಟ್ವಾಳ ಪೇಟೆಯ ಬಡ್ಡಕಟ್ಟೆಯ ಹೊಟೇಲ್ ಬಳಿ ಸೋಮವಾರ ನಡೆದಿದೆ.

ಘಟನೆಯಿಂದ ಇಲ್ಲಿನ ಬಿಜೆಪಿ ಕಾರ್ಯಕರ್ತ, ಮಾಣಿ ಗ್ರಾಮ ಪಂಚಾಯತ್ ಸದಸ್ಯ ಗಣೇಶ್ ರೈ ಮಾಣಿ ಹಾಗೂ ಪುಷ್ಪರಾಜ್ ಹಲ್ಲೆಗೊಳಗಾಗಿದ್ದು, ಇವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಳು ಚಲನಚಿತ್ರ ನಟ ಸುರೇಂದ್ರ ಶೆಟ್ಟಿ ಬಂಟ್ವಾಳ ಹಾಗೂ ಇತರ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿವರ: ಇಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಬಿಜೆಪಿ ಕಾರ್ಯಕರ್ತರಾದ ಗಣೇಶ್, ಚರಣ್, ಪುಷ್ಪ ರಾಜ್ ಮತ್ತಿತರರು ಬಡ್ಡಕಟ್ಟೆ ಹೊಟೇಲೊಂದರಲ್ಲಿ ಊಟ ಮಾಡಲು ತೆರಳಿದ್ದರು ಎನ್ನಲಾಗಿದೆ. ಇದೇ ವೇಳೆ ಸರೇಂದ್ರ ಶೆಟ್ಟಿ ಹಾಗೂ ತಂಡ ತಲವಾರು ಹಿಡಿದು ಹೋಟೆಲ್‌ಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ, ತದನಂತರ ನಮ್ಮ ಮೇಲೆ ಏಕಾಏಕಿ ತಲವಾರು ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಫೇಸ್ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ವಿಚಾರಕ್ಕೆ ಸಂಬಂಧಿಸಿ ನಿನ್ನೆ ರಾತ್ರಿ ಬಂಟ್ವಾಳದ ಬೈಪಾಸ್‌ನಲ್ಲಿ ನಡೆದ ಹಲ್ಲೆಯ ಮುಂದುವರಿದ ಭಾಗವಾಗಿ ಈ ದಾಳಿ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದು, ತನಿಖೆಯ ಬಳಿಕವೇ ಸ್ಪಷ್ಟ ಮಾಹಿತಿ ಬರಬೇಕಾಗಿದೆ.

ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಸ್ಥಳೀಯರಿಂದ ಮಾಹಿತಿ ಕಲೆ ಹಾಕಿದ್ದಾರೆ. ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಸುರೇಂದ್ರ ಶೆಟ್ಟಿ ಬಂಟ್ವಾಳ ಈ ಹಿಂದೆ ಹಿಂದುತ್ವ ಪರ ಸಂಘಟನೆಯಲ್ಲಿ ಕಾರ್ಯನಿರ್ವಹಿಸಿದ್ದು, ತದನಂತರ ಸಂಘಟನೆಯ ಜೊತೆ ಮುನಿಸಿಕೊಂಡು ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ. ಅಲ್ಲದೆ, ಇತ್ತೀಚಿಗೆ ತುಳು ಚಲನಚಿತ್ರದಲ್ಲಿಯೂ ನಟಿಸಿದ್ದಾರೆ.

ಹಲ್ಲೆ ವೀಡಿಯೊ ವೈರಲ್: ತುಳು ಚಲನಚಿತ್ರ ನಟ ಸುರೇಂದ್ರ ಶೆಟ್ಟಿ ಬಂಟ್ವಾಳ ಹಾಗೂ ತಂಡ ತಲವಾರು ಹಿಡಿದು ಅವಾಚ್ಯ ಶಬ್ದಗಳಿಂದ ಬೈಯುವ ಹಾಗೂ ಹಲ್ಲೆ ನಡೆಸುವ ದೃಶ್ಯವನ್ನು ವ್ಯಕ್ತಿಯೊಬ್ಬರು ಚಿತ್ರಿಸಿದ್ದು, ಇದು ಘಟನೆಗೆ ಸಂಬಂಧಿಸಿದ ವೀಡಿಯೊ ತುಣುಕು ಎಂದು ಹೇಳಲಾಗುತ್ತಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯುವಕನಿಗೆ ತಂಡದಿಂದ ಹಲ್ಲೆ: ದೂರು
ಬಂಟ್ವಾಳ: ತಂಡವೊಂದು ಸೆಲೂನ್‌ಗೆ ನುಗ್ಗಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ಬೈಪಾಸ್‌ನ ನಾಲ್ಕುಮಾರ್ಗ ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ.
ಇಲ್ಲಿನ ಕೇಶವ ಎಂಬವರಿಗೆ ಸೇರಿದ ಸೆಲೂನ್‌ನಲ್ಲಿ ಕೆಲಸ ಮಾಡುತ್ತಿರುವ ದೀಕ್ಷಿತ್ ಹಲ್ಲೆಗೊಳಗಾದ ಯುವಕ ಎಂದು ಗುರುತಿಸಲಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಫೇಸ್ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ವಿಚಾರಕ್ಕೆ ಸಂಬಂಧಿಸಿ ಭುವಿತ್ ಶೆಟ್ಟಿ ಸೇರಿದಂತೆ ಎಂಟು ಜನರ ತಂಡ ಮಾರಣಾಂತಿಕ ವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೀಕ್ಷಿತ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News