ಕೇಂದ್ರೀಯ ಸಂಸ್ಥೆಗಳನ್ನು ಪ್ರಧಾನಿ ಕಚೇರಿ ಆಪ್ ವಿರುದ್ಧ ಛೂ ಬಿಡುತ್ತಿದೆ: ಕೇಜ್ರಿವಾಲ್ ಆರೋಪ
ಹೊಸದಿಲ್ಲಿ,ಜೂ.11: ಪ್ರಧಾನಿ ಕಚೇರಿಯು ಆಮ್ ಆದ್ಮಿ ಪಾರ್ಟಿ(ಆಪ್) ಸರಕಾರದ ಕಾರ್ಯ ನಿರ್ವಹಣೆಯನ್ನು ಸ್ಥಗಿತಗೊಳಿಸಲು ಅದರ ವಿರುದ್ಧ ಉಪ ರಾಜ್ಯಪಾಲರು,ಐಎಎಸ್ ಅಧಿಕಾರಿಗಳು ಮತ್ತು ಸರಕಾರಿ ಸಂಸ್ಥೆಗಳನ್ನು ಛೂ ಬಿಡುತ್ತಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಇಲ್ಲಿ ಆರೋಪಿಸಿದರು. ಸಿಬಿಐ ಮತ್ತು ಎಸಿಬಿಯಂತಹ ಏಜೆನ್ಸಿಗಳು ತನ್ನನ್ನು ಸುಳ್ಳುಪ್ರಕರಣಗಳಲ್ಲಿ ಸಿಲುಕಿಸಲು ಹುನ್ನಾರ ನಡೆಸುತ್ತಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮುಖ್ಯ ಕಾರ್ಯದರ್ಶಿ ಅಂಶು ಪ್ರಸಾದ್ ಅವರ ಮೇಲೆ ನಡೆದಿತ್ತೆನ್ನಲಾದ ಹಲ್ಲೆಯ ಬಳಿಕ ಕಳೆದ ನಾಲ್ಕು ತಿಂಗಳುಗಳಿಂದಲೂ ದಿಲ್ಲಿ ಸಚಿವರೊಂದಿಗೆ ಸಭೆಗಳನ್ನು ಬಹಿಷ್ಕರಿಸುತ್ತಿರುವ ಅಧಿಕಾರಿಗಳಿಗೆ ತಮ್ಮ ಮುಷ್ಕರವನ್ನು ಮುಂದುವರಿಸುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಆಪಾದಿಸಿದರು.
ಮುಷ್ಕರವನ್ನು ಅಕ್ರಮ ಎಂದು ಬಣ್ಣಿಸಿದ ಅವರು, ಈ ಮುಷ್ಕರದ ಹಿಂದೆ ಪ್ರಧಾನಿ ಕಚೇರಿ ಮತ್ತು ಉಪರಾಜ್ಯಪಾಲ ಅನಿಲ್ ಬೈಜಾಲ್ ಅವರ ಕೈವಾಡವಿದೆ. ಕಾನೂನಿನಂತೆ ಐಎಎಸ್ ಅಧಿಕಾರಿಗಳು ಮುಷ್ಕರದಲ್ಲಿ ತೊಡಗುವಂತಿಲ್ಲ. ಮುಷ್ಕರಕ್ಕೆ ಯಾವುದೇ ಕಾರಣಗಳಿಲ್ಲ,ಅವರು ಯಾವುದೇ ಬೇಡಿಕೆಗಳನ್ನೂ ಹೊಂದಿಲ್ಲ ಎಂದರು.
ತಮ್ಮ ಮೇಲೆ ಉಪರಾಜ್ಯಪಾಲರ ಕಚೇರಿಯಿಂದ ಒತ್ತಡವಿದೆ ಎಂದು ಕೆಲವು ಅಧಿಕಾರಿಗಳು ತಿಳಿಸಿದ್ದಾರೆ ಎಂದೂ ಕೇಜ್ರಿವಾಲ್ ಹೇಳಿದರು.
ಆಪ್ ನಾಯಕರ ಮಾನಹಾನಿಗೊಳಿಸುವ ಮತ್ತು ಅವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದ ಅವರು,ಭ್ರಷ್ಟಾಚಾರ ನಿಗ್ರಹ ಘಟಕವು ಆಪ್ ಸರಕಾರವು ರಚನೆಯಾಗಿದ್ದ 2015,ಫೆಬ್ರುವರಿಯ ಬಳಿಕ ಆಪ್ ಸಚಿವರು ಮತ್ತು ಅವರ ಬಂಧುಗಳ ವಿರುದ್ಧ 14 ಪ್ರಕರಣಗಳನ್ನು ದಾಖಲಿಸಿದೆ,ಆದರೆ ಈವರೆಗೂ ಒಬ್ಬರನ್ನೂ ಬಂಧಿಸಿಲ್ಲ ಎಂದು ಆರೋಪಿಸಿದರು.
ತನ್ನ ಹಾಗೂ ಸಹೋದ್ಯೋಗಿಗಳಾದ ಮನೀಷ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ,ಆದರೆ ಈ ಪ್ರಕರಣಗಳಲ್ಲಿ ಯಾರನ್ನೂ ಬಂಧಿಸಲಾಗಿಲ್ಲ. ಇಂತಹ ಪ್ರಕರಣಗಳಲ್ಲಿ ಕೇಂದ್ರದ ಏಜೆನ್ಸಿಗಳು ನಮ್ಮನ್ನೇಕೆ ಮೊದಲು ಬಂಧಿಸುವುದಿಲ್ಲ ಎಂದು ಪ್ರಶ್ನಿಸಿದರು. ಸೇಡಿನ ರಾಜಕೀಯ ನಡೆಯುತ್ತಿದೆ ಎಂದು ಆರೋಪಿಸಿದ ಅವರು,ದಿಲ್ಲಿ ಸರಕಾರದ ಅಧಿಕಾರಿಗಳಿಗೆ ಬಹಿರಂಗವಾಗಿ ಕಿರುಕುಳ ನೀಡಲಾಗುತ್ತಿದೆ ಮತ್ತು ಅವರನ್ನು ಶೋಷಿಸಲಾಗುತ್ತಿದೆ. ಜನತೆಗೆ ಉಪಕಾರಿಯಾಗಿರುವ ಮೊಹಲ್ಲಾ ಕ್ಲಿನಿಕ್‌ಗಳ ಬಗ್ಗೆ ಸಿಬಿಐ ಏಕೆ ತನಿಖೆ ನಡೆಸುತ್ತಿದೆ ಮತ್ತು ವಿವಿಧ ಅಧಿಕಾರಿಗಳನ್ನೇಕೆ ಕರೆಸಿ ವಿಚಾರಣೆ ನಡೆಸುತ್ತಿದೆ ಎಂದೂ ಪ್ರಶ್ನಿಸಿದರು.
ಪ್ರಧಾನಿಯವರ ಸಿಬಿಐ ಮತ್ತು ಉಪರಾಜ್ಯಪಾಲರ ಎಸಿಬಿ ಕೇಳಿರುವ ಎಲ್ಲ ಕಡತಗಳನ್ನು ತಾನು ಸಾರ್ವಜನಿಕವಾಗಿ ಲಭ್ಯವಾಗಿಸುತ್ತೇನೆ. ಆ ಕಡತಗಳನ್ನು ಕೋರಲು ಕಾರಣಗಳನ್ನು ಪ್ರಧಾನಿ ಮತ್ತು ಉಪರಾಜ್ಯಪಾಲರು ವಿವರಿಸಬೇಕು,ಇಲ್ಲದಿದ್ದರೆ ಸೇಡಿನ ರಾಜಕೀಯಕ್ಕಾಗಿ ದಿಲ್ಲಿ ನಿವಾಸಿಗಳ ಕ್ಷಮೆ ಯಾಚಿಸಬೇಕು ಎಂದು ಕೇಜ್ರಿವಾಲ್ ಹೇಳಿದರು.