ಮುಖ್ಯಮಂತ್ರಿಗೆ ವಿಶ್ವಕರ್ಮ ಸಮಾಜದ ಬೇಡಿಕೆ ಸಲ್ಲಿಕೆ: ವಿಶ್ವಕರ್ಮ ಒಕ್ಕೂಟ
ಉಡುಪಿ, ಜೂ.11: ಮುಂದಿನ ತಿಂಗಳು ರಾಜ್ಯದ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿ, ವಿಶ್ವಕರ್ಮ ಸಮಾಜದ ಬೇಡಿಕೆಗಳನ್ನು ಮುಂದಿಡಲಾಗುವುದು ಎಂದು ಉಡುಪಿ, ದ.ಕ. ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಯು.ಕೆ.ಎಸ್.ಸೀತಾರಾಮ ತಿಳಿಸಿದ್ದಾರೆ.
ಉಡುಪಿ ಕುಂಜಿಬೆಟ್ಟಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಜರಗಿದ ವಿಶ್ವಕರ್ಮ ಒಕ್ಕೂಟದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಮಂಗಳೂರು ಶ್ರೀಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಕೇಶವ ಆಚಾರ್ಯ, ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಸುದೇವ ಆಚಾರ್ಯ ಮುಖ್ಯ ಅತಿಥಿಗಳಾಗಿದ್ದರು. ಗೌರವಾಧ್ಯಕ್ಷ ಅಲೆವೂರು ಯೋಗೀಶ ಆಚಾರ್ಯ, ಉಪಾಧ್ಯಕ್ಷ ಮಧು ಆಚಾರ್ಯ ಉಪಸ್ಥಿತರಿದ್ದರು.
ಪ್ರಕಾಶ್ ಆಚಾರ್ಯ ನೇರಂಬಳ್ಳಿ ಸ್ವಾಗತಿಸಿದರು. ರಮೇಶ್ ಬಿ.ಜಿ. ಆಚಾರ್ಯ 2017-18ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಕೋಶಾ ಧಿಕಾರಿ ಜನಾರ್ದನ ಆಚಾರ್ಯ ಜಮಾ ಖರ್ಚಿನ ವಿವರ ನೀಡಿದರು. ದಿನೇಶ್ ಆಚಾರ್ಯ ಚೇಂಪಿ ವಂದಿಸಿದರು. ಬಿ.ಎ.ಆಚಾರ್ಯ ಮಣಿಪಾಲ ಹಾಗೂ ಗಣಪತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಮಹಾಸಭೆಯ ಮೊದಲಿಗೆ ಸಮಾಜ ಬಾಂಧವರಿಗೆ ಪ್ರಧಾನ ಕಾರ್ಯದರ್ಶಿ ಕೆ.ಮುರಳೀಧರ ಆಚಾರ್ಯ ಉಸ್ತುವಾರಿಯಲ್ಲಿ ಕಥಾ-ಕವನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕೊನೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಿ.ಬಿ. ಶಿವಣ್ಣ ಮೈಸೂರು ಹಾಗೂ ಉಪನ್ಯಾಸಕಿ ಸುಮಾ ತೀರ್ಪುಗಾರರಾಗಿ ಸಹಕರಿಸಿದರು.