×
Ad

ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ ಎಂಬುದು ದಾರಿ ತಪ್ಪಿಸುವ ಯತ್ನ: ಚಂದ್ರಪ್ರಕಾಶ್ ಶೆಟ್ಟಿ

Update: 2018-06-11 21:00 IST

ಬಂಟ್ವಾಳ, ಜೂ. 11: ರಮಾನಾಥ ರೈ ಅವರು ಸಚಿವರಾಗಿದ್ದಾಗ ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತರಿಗೆ 17 ಕೋಟಿ ರೂ. ಮಂಜೂರುಗೊಂಡಿತ್ತು. ಭೂಮಿಯ ದಾಖಲೆಪತ್ರ ಸರಿಯಾಗಿ ಒದಗಿಸಿದವರಿಗೆ ಪರಿಹಾರ ದೊರಕಿದೆ. ಆದರೆ ಇದೀಗ ಮತ್ತೆ ಪರಿಹಾರ ಸಿಕ್ಕಿಲ್ಲ ಎಂಬ ಮನವಿಗಳು ಬರುತ್ತಿದ್ದು, ಇದು ದಾರಿ ತಪ್ಪಿಸುವ ಪ್ರಯತ್ನವಾಗಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಹೇಳಿದ್ದಾರೆ.

ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ ಎಂಬ ಮನವಿಗಳು ಸಲ್ಲಿಕೆ ಆಗುತ್ತಿವೆ. ಬಿಜೆಪಿ ಸರಕಾರ ಇದ್ದಾಗ ಡ್ಯಾಂಗೆ ಶಂಕುಸ್ಥಾಪನೆ ಆಗಿತ್ತು. ಕಾಮಗಾರಿ ಪ್ರಾರಂಭಿಸುವ ಸಂದರ್ಭ ಕೃಷಿಕರ ಭೂಮಿ ಮುಳುಗಡೆ ಕುರಿತು ಗಮನ ಕೊಡದಿರುವುದೇ ಸಮಸ್ಯೆಗೆ ಕಾರಣ ಎಂದು ಹೇಳಿದರು.

ರಮಾನಾಥ ರೈ ಮಂತ್ರಿಯಾಗಿದ್ದಾಗ ಸರಕಾರಕ್ಕೆ ಪರಿಹಾರ ದೊರಕಿಸುವಂತೆ ಒತ್ತಾಯ ಹೇರಲಾಗಿತ್ತು. ಈ ಸಂದರ್ಭ ರೈ ನೇತೃತ್ವದಲ್ಲಿ ಅಧಿಕಾರಿಗಳ ಮಟ್ಟದ ಸಭೆ ನಡೆದಿತ್ತು. 5 ಮೀ. ಮುಳುಗಡೆ ರೈತರಿಗೆ ಮೊದಲ ಹಂತ, 6 ಮೀ. ಮುಳುಗಡೆ ರೈತರಿಗೆ ಎರಡನೆ ಹಂತದಲ್ಲಿ ಪರಿಹಾರ ದೊರಕಿಸುವ ಕುರಿತು ಮಾತುಕತೆ ನಡೆಯಿತು. ಮೊದಲ ಹಂತದಲ್ಲಿ 7 ಕೋಟಿ ರೂ. ಬಳಿಕ 10 ಕೋಟಿ ರೂ. ಮಂಜೂರಾಗಿತ್ತು ಎಂದು ಹೇಳಿದ ಶೆಟ್ಟಿ, ಭೂಮಿಯ ದಾಖಲೆಪತ್ರ ಒದಗಿಸಿದವರಿಗೆ ಪರಿಹಾರ ದೊರಕಿದೆ. ಮಹಾನಗರಪಾಲಿಕೆಯ ನೇತೃತ್ವದಲ್ಲಿ ಪರಿಹಾರ ಹಣ ವಿತರಣೆ ಆಗಲಿದೆ. ಆದರೆ ಕೆಲವೊಂದು ರೈತ ಮುಖಂಡರು ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ನ್ಯಾಯೋಚಿತ ಪರಿಹಾರ ದೊರಕಬೇಕು ಎಂಬುದು ನಮ್ಮ ಆಶಯವೂ ಹೌದು. ಜಿಲ್ಲಾ ಪಂಚಾಯತ್ ಸದಸ್ಯನಾಗಿ ರೈತರಿಗೆ ರಮಾನಾಥ ರೈ ಸಹಕಾರದಿಂದ ಪರಿಹಾರ ಒದಗಿಸುತ್ತೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಪ್ರಮುಖರಾದ ಯೂಸುಫ್ ಕರಂದಾಡಿ, ಮಧುಸೂಧನ ಶೆಣೈ, ಜಗದೀಶ ಕುಂದರ್, ಲೋಲಾಕ್ಷ ಶೆಟ್ಟಿ, ವೆಂಕಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News