×
Ad

ಜೂ.13ಕ್ಕೆ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Update: 2018-06-11 21:47 IST

ಉಡುಪಿ, ಜೂ.11: ಪೆರ್ಡೂರು ಬಳಿ ದನದ ವ್ಯಾಪಾರಿ ಹುಸೇನಬ್ಬ(62) ಅನುಮಾನಾಸ್ಪದ ಸಾವಿನ ಪ್ರಕರಣದ ಆರೋಪಿ ಹಿರಿಯಡ್ಕ ಎಸ್ಸೈ ಸಹಿತ ಮೂವರು ಪೊಲೀಸರ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಆರೋಪಿ ಪರ ವಕೀಲರು ಇಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.

ನ್ಯಾಯಾಂಗ ಬಂಧನದಲ್ಲಿರುವ ಹಿರಿಯಡ್ಕ ಪೊಲೀಸ್ ಉಪನಿರೀಕ್ಷಕ ಡಿ. ಎನ್.ಕುಮಾರ್, ಹೆಡ್‌ಕಾನ್‌ಸ್ಟೇಬಲ್ ಮೋಹನ್ ಕೊತ್ವಾಲ್ ಹಾಗೂ ಠಾಣಾ ಜೀಪು ಚಾಲಕ ಗೋಪಾಲ್ ಅವರಿಗೆ ಜಾಮೀನು ಕೋರಿ ಜೂ.6ರಂದು ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಅದರ ವಾದ ಮಂಡನೆಗೆ ಇಂದು ಅವಕಾಶ ಕಲ್ಪಿಸಲಾಗಿತ್ತು.

ಡಿ.ಎನ್.ಕುಮಾರ್, ಕೋತ್ವಾಲ್ ಹಾಗೂ ಗೋಪಾಲ್ ಪರ ಕ್ರಮವಾಗಿ ವಕೀಲರಾದ ಶಾಂತರಾಮ್ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ, ಎ.ಸಂಜೀವ, ಇಂದು ವಾದ ಮಂಡಿಸಿದರು. ಇದಕ್ಕೆ ಆಕ್ಷೇಪಣೆ ಸಲ್ಲಿಸಿದ ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿಬಾಯಿ ವಾದ ಮಂಡಿಸಲು ಕಾಲಾವಕಾಶ ಕೇಳಿದರು. ಹಾಗಾಗಿ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಮುಂದಿನ ವಿಚಾರಣೆಯನ್ನು ಜೂ.13ಕ್ಕೆ ಮುಂದೂಡಿ ಆದೇಶ ನೀಡಿದರು.

ಈ ಮಧ್ಯೆ ಇಂದು ಪ್ರಕರಣದ ಪ್ರಮುಖ ಆರೋಪಿ ಸುರೇಶ್ ಮೆಂಡನ್ ಯಾನೆ ಸೂರಿ ಸಹಿತ ಇತರ ಏಳು ಮಂದಿ ಬಜರಂಗದಳ ಕಾರ್ಯಕರ್ತರಿಗೆ ಜಾಮೀನು ಕೋರಿ ವಕೀಲ ಮಟ್ಟಾರು ರತ್ನಾಕರ ಹೆಗ್ಡೆ ಜಿಲ್ಲಾ ಮತ್ತು ಸ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು.

ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ತುಕರಾಮ್‌ಗೆ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಮಟ್ಟಾರು ರತ್ನಾಕರ್ ಹೆಗ್ಡೆ ಇಂದು ವಾದ ಮಂಡಿಸಿದರು. ಈ ಎಲ್ಲ ಅರ್ಜಿಯ ವಿಚಾರಣೆ ಯನ್ನು ಜೂ.13ಕ್ಕೆ ಮುಂದೂಡಲಾಯಿತು. ಈ ಪ್ರಕರಣದಲ್ಲಿ ಪೊಲೀಸರು ಸಹಿತ ಒಟ್ಟು 15 ಆರೋಪಿಗಳಿದ್ದು, ಅವರಲ್ಲಿ 10 ಮಂದಿಯನ್ನು ಬಂಧಿಸ ಲಾಗಿದೆ. ತುಕರಾಮ್ ಸೇರಿದಂತೆ ಐದು ಮಂದಿ ಆರೆಪಿಗಳು ತಲೆಮರೆಸಿ ಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News