×
Ad

ಕಲ್ಲಡ್ಕ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಯುವಕನಿಗೆ ತಂಡದಿಂದ ಹಲ್ಲೆ

Update: 2018-06-11 22:10 IST

ಬಂಟ್ವಾಳ, ಜೂ. 11: ಹಳೆ ದ್ವೇಷದ ಹಿನ್ನೆಲೆಯಲ್ಲಿ ತಂಡವೊಂದು ಯುವಕನೋರ್ವನಿಗೆ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಕಲ್ಲಡ್ಕದ ಮಾರುಕಟ್ಟೆ ಬಳಿ ಸೋಮವಾರ ರಾತ್ರಿ ನಡೆದಿದೆ.

ಮೆಲ್ಕಾರ್ ನಿವಾಸಿ ಚೇತನ್ ಹಲ್ಲೆಗೊಳಗಾದ ಯುವಕ ಎಂದು ಗುರುತಿಸಲಾಗಿದೆ.

ಚೇತನ್ ಕಲ್ಲಡ್ಕ ಕೆಳಗಿನ ಪೇಟೆಯ ಫ್ಯಾನ್ಸಿಯೊಂದಕ್ಕೆ ಬಂದಿದ್ದ ವೇಳೆ ಕಾರಿನಲ್ಲಿ ಬಂದ ಕಿರಣ್ ಮೆಲ್ಕಾರ್, ಯೋಗೀಶ್, ಮೋಹನ್, ಕೀರ್ತನ್, ಲೋಕೇಶ್, ವಿದ್ಯಾಧರ ಎಂಬವರ ತಂಡ ಕ್ರಿಕೆಟ್ ಬ್ಯಾಟ್ ಹಾಗೂ ವಿಕೆಟ್‌ನಿಂದ ಚೇತನ್ ಮೇಲೆ ದಾಳಿ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಗುಂಪಿನ ಹಠಾತ್ ದಾಳಿಯಿಂದ ತಪ್ಪಿಸಿಕೊಳ್ಳಲು ಚೇತನ್ ಫ್ಯಾನ್ಸಿಯ ಒಳಗೆ ಹೊಕ್ಕ ಕಾರಣದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೈ ಹಾಗೂ ಎದೆಯ ಭಾಗಕ್ಕೆ ಗಾಯವಾಗಿರುವ ಚೇತನ್‌ ರನ್ನು ಬಂಟ್ವಾಳ ಆಸ್ಪತ್ರೆಗೆ ದಾಖಲಾಗಿಸಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಮೆಲ್ಕಾರ್ ಸಮೀಪ ನಡೆದಿದ್ದ ಗುಂಪುಗಳೆರಡರ ನಡುವಿನ ಗಲಾಟೆಯ ಮುಂದುವರಿದ ಭಾಗವಾಗಿ ಈ ದಾಳಿ, ಹಲ್ಲೆ ನಡೆದಿದೆ ಎಂದು ಎಸ್ಪಿ ರವಿಕಾಂತೇ ಗೌಡ ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಕಲ್ಲಡ್ಕ, ಪಾಣೆಮಂಗಳೂರು, ಮೆಲ್ಕಾರ್, ಬಿ.ಸಿ.ರೋಡು, ಬಂಟ್ವಾಳ ಮೊದಲಾದಡೆಗಳಲ್ಲಿ ಪೊಲೀಸ್ ಬಿಗಿ ಬಂದೋ ಬಸ್ತು ಏರ್ಪಡಿಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News