×
Ad

ದಫನ ಮಾಡಿದ್ದ ಮೃತದೇಹ ಹೊರತೆಗೆದು ಮಹಜರು

Update: 2018-06-11 23:26 IST

ಮಂಗಳೂರು, ಜೂ. 11: ದನದ ವ್ಯಾಪಾರಿ ಜೋಕಟ್ಟೆಯ ಹುಸೇನಬ್ಬ ಸಾವು ಪ್ರಕರಣಕ್ಕೆ ಸಂಬಂಧಿಸಿ ಮ್ಯಾಜಿಸ್ಟ್ರೇಟ್ ತನಿಖೆಯು ಸೋಮವಾರ ನಡೆಯಿತು.

ಹುಸೇನಬ್ಬ ಅವರು ಹಿರಿಯಡ್ಕ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಕುರಿತ ದೂರಿನ ಹಿನ್ನೆಲೆಯಲ್ಲಿ ಈ ತನಿಖೆ ನಡೆಯುತ್ತಿದ್ದು, ಅದರಂತೆ ಜೋಕಟ್ಟೆಯ ಈದ್ಗಾ ಖಬರಸ್ಥಾನದಲ್ಲಿ ದಫನ ಮಾಡಲಾಗಿದ್ದ ಹುಸೇನಬ್ಬರ ಮೃತದೇಹವನ್ನು ಉಡುಪಿಯ ನ್ಯಾಯಾಧೀಶ ಇರ್ಫಾನ್ ಅವರ ಸಮ್ಮುಖದಲ್ಲಿ ಹೊರತೆಗೆದು ಮಹಜರು ನಡೆಸಲಾಯಿತು. ಈ ಸಂದರ್ಭ ಹುಸೇನಬ್ಬರ ಸಂಬಂಧಿಕರು, ತನಿಖಾಧಿಕಾರಿ ಹೃಷಿಕೇಶ್ ಸೋನಾವಣೆ ಹಾಜರಿದ್ದರು.

ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ಆಗಮಿಸಿದ ನ್ಯಾಯಾಧೀಶರು ಮಧ್ಯಾಹ್ನದ 12 ಗಂಟೆಯವರೆಗೆ ಮಹಜರು ಪ್ರಕ್ರಿಯೆ ನಡೆಸಿದ ಬಳಿಕ ಧಾರ್ಮಿಕ ವಿಧಿವಿಧಾನದೊಂದಿಗೆ ಮತ್ತೆ ಮೃತದೇಹದ ದಫನ ಕಾರ್ಯ ನಡೆಯಿತು.

ಅಧಿಕಾರಿಗಳು ದಫನ ಭೂಮಿಯಲ್ಲಿ ಸಂಜೆಯವೆರಗೂ ಉಪಸ್ಥಿತರಿದ್ದರು. ಸ್ಥಳೀಯ ಮೂವರನ್ನು ಸಾಕ್ಷಿಗಳನ್ನಾಗಿ ಪರಿಗಣಿಸಲಾಯಿತು. ಅಲ್ಲದೆ, ಅಲ್ಲಿದ್ದ ಕೆಲವರಿಂದ ಹೇಳಿಕೆಗಳನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಉಡುಪಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪಣಂಬೂರು ಪೊಲೀಸರು ಕೂಡಾ ಉಪಸ್ಥಿತರಿದ್ದರು.

ಹುಸೇನಬ್ಬ ಅವರ ಸಾವು ಪೊಲೀಸ್ ಕಸ್ಟಡಿಯಲ್ಲಿ ಆಗಿದೆ ಎಂಬ ಕುಟುಂಬಸ್ಥರ ದೂರಿನ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಹಿರಿಯಡ್ಕ ಠಾಣೆಯ ಎಸ್ಸೈ, ಇಬ್ಬರು ಪೊಲೀಸರು ಸಹಿತ 10 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News