ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿತ: ರಸ್ತೆ ಮಧ್ಯೆ ಸಿಲುಕಿಕೊಂಡ ಪ್ರಯಾಣಿಕರು
ಬೆಳ್ತಂಗಡಿ, ಜೂ. 12: ಸೋಮವಾರ ಸಂಜೆಯಿಂದ ಸುರಿದ ನಿರಂತರ ಮಳೆಗೆ ಚಾರ್ಮಾಡಿ ಘಾಟ್ ನಲ್ಲಿ ರಾತ್ರಿ ಸುಮಾರು 9 ಕಡೆಗಳಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ನೂರಾರು ವಾಹನಗಳು ಎರಡೂ ಕಡೆಗಳಲ್ಲಿ ನಿಂತಿವೆ. ನಿನ್ನೆ ರಾತ್ರಿಯಿಂದ ಘಾಟ್ ರಸ್ತೆಯಲ್ಲಿ ಸಿಲುಕಿಕೊಂಡು ಸಂಕಷ್ಟದಲ್ಲಿರುವ ಪ್ರಯಾಣಿಕರಿಗೆ ಸ್ಥಳೀಯ ನಿವಾಸಿಗಳು ಉಪವಾಸದ ಮಧ್ಯೆಯೂ ಆಹಾರ ತಯಾರಿಸಿ ನೀಡುತಿದ್ದಾರೆ.
9 ಕಡೆ ಗುಡ್ಡ ಜರಿದು ರಸ್ತೆಗೆ ಮಣ್ಣು ಬಿದ್ದ ಪರಿಣಾಮ ಯಾವುದೇ ವಾಹನ ಸಂಚರಿಸಲು ಸಾಧ್ಯವಾಗದೆ ಎರಡೂ ಕಡೆಗಳಲ್ಲಿ ನಿಂತಿದ್ದು, ಪ್ರಯಾಣಿಕರು ರಸ್ತೆ ಮಧ್ಯೆ ಸಿಲುಕಿಕೊಂಡಿದ್ದಾರೆ. ಮೂಡಿಗೆರೆ ಕಡೆಗೆ ಹೋಗುವ ಮತ್ತು ಮೂಡಿಗೆರೆಯಿಂದ ಮಂಗಳೂರು ಹಾಗು ಇನ್ನಿತರ ಕಡೆಗಳಿಗೆ ಹೋಗುವ ಬಸ್ ಪ್ರಯಾಣಿಕರು ನಿನ್ನೆ ರಾತ್ರಿಯಿಂದ ಘಟನಾ ಸ್ಥಳದಲ್ಲಿ ಸಿಲುಕಿಕೊಂಡಿದ್ದು ಅವರಿಗೆ ಚಾರ್ಮಾಡಿಯ ಸ್ಥಳೀಯ ಜನರು ತಮ್ಮ ಮನೆಯಲ್ಲಿ ಆಹಾರ ತಯಾರಿಸಿ ಘಟನಾ ಸ್ಥಳಗಳಿಗೆ ತಲುಪಿಸಿ ಪ್ರಯಾಣಿಕರಿಗೆ ನೀಡುತಿದ್ದಾರೆ. ಗುಡ್ಡ ಜರಿದು ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸುವಲ್ಲಿ ನೂರಕ್ಕೂ ಹೆಚ್ಚು ಮಂದಿ ಕೆಲಸ ಮಾಡುತಿದ್ದಾರೆ.
ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮೂಡಿಗೆರೆ ಶಾಸಕ ಕುಮಾರ ಸ್ವಾಮಿ ಘಟನಾ ಸ್ಥಳದಲ್ಲಿದ್ದು ಮಾರ್ಗದರ್ಶನ ನೀಡುತಿದ್ದಾರೆ.