ಮಂಗಳೂರು : ಬಾಕಿ ತುಟ್ಟಿ ಭತ್ಯೆ, ಕನಿಷ್ಠ ಕೂಲಿ ಶೀಘ್ರ ಪಾವತಿಗೆ ಆಗ್ರಹ; ಬೀಡಿ ಕಾರ್ಮಿಕರ ಧರಣಿ
ಮಂಗಳೂರು, ಜೂ. 12: ಕಳೆದ ಮೂರು ವರ್ಷಗಳವರೆಗಿನ ಪ್ರತಿ ಸಾವಿರ ಬೀಡಿಗಳ ಮೇಲೆ 12.75 ರೂ. ಬಾಕಿ ತುಟ್ಟಿ ಭತ್ಯೆಯನ್ನು ಶೀಘ್ರ ಪಾವತಿಸಲು ಎಸ್.ಕೆ. ಬೀಡಿ ವರ್ಕ್ಸ್ ಫೆಡರೇಶನ್(ಎಐಟಿಯುಸಿ) ನೇತೃತ್ವದಲ್ಲಿ ಆಗ್ರಹಿಸಲಾಯಿತು.
ನಗರದ ಪಿ.ವಿ.ಎಸ್. ವೃತ್ತದಿಂದ ಸಾಗಿದ ಧರಣಿ ನಿರತರು ಘೋಷಣೆಗಳನ್ನು ಕೂಗುತ್ತಾ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿವರೆಗೆ ಮೆರವಣಿಗೆ ನಡೆಸಿದರು.
ಬಳಿಕ ಮಾತನಾಡಿದ ಎಸ್.ಕೆ. ಬೀಡಿ ವರ್ಕ್ಸ್ ಫೆಡರೇಶನ್ (ಎಐಟಿಯುಸಿ)ನ ಕಾರ್ಯದರ್ಶಿ ವಿ.ಎಸ್.ಬೇರಿಂಜ, ಬೀಡಿ ಕಾರ್ಮಿಕರಿಗೆ 210 ರೂ. ಕನಿಷ್ಠ ಕೂಲಿ ಹಾಗೂ ಬೆಲೆ ಏರಿಕೆಯ ಪ್ರತಿ ಅಂಶಕ್ಕೆ ನಾಲ್ಕು ಪೈಸೆಯಂತೆ 10.52 ರೂ. ತುಟ್ಟಿ ಭತ್ಯೆಯನ್ನು ಪಾವತಿಸುವುದಾಗಿ ಕನಿಷ್ಠ ಕೂಲಿ ನಿರ್ಣಯ ಉಪಸಮಿತಿಯಲ್ಲಿ ಒಪ್ಪಿಕೊಂಡ ಬೀಡಿ ಮಾಲಕರು ಇದೀಗ 2018ರ ಎಪ್ರೀಲ್ ಒಂದರಿಂದ ಕೇವಲ ತುಟ್ಟಿಭತ್ಯೆಯನ್ನು ಮಾತ್ರ ಪಾವತಿಸಿದ್ದಾರೆ. ಕನಿಷ್ಠ ಕೂಲಿ 210 ರೂ.ನ್ನು ಪಾವತಿಸದೆ ಸಮಿತಿಯ ತೀರ್ಮಾನಕ್ಕೆ ತಪ್ಪಿದ್ದಾರೆ ಎಂದು ಬೀಡಿ ಮಾಲಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿಪಿಐ, ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಐಟಿಸಿಯುನ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಎಚ್.ವಿ.ರಾವ್, ಬೀಡಿ ಕಾರ್ಮಿಕ ಮುಖಂಡರಾದ ಸುಲೋಚನಾ ಕವತ್ತಾರು, ಸರಸ್ವತಿ ಕಡೇಶಿವಾಲಯ, ಒ.ಕೃಷ್ಣ ವಿಟ್ಲ, ಹರ್ಷಿತ್ ಬಂಟ್ವಾಳ, ಚಿತ್ರಾಕ್ಷಿ ಕುಂಜತ್‌ಬೈಲ್, ಕೆ.ಈಶ್ವರ್, ಎಂ.ಶಿವಪ್ಪ ಕೋಟ್ಯಾನ್, ಶಮಿತಾ ಬಿ.ಸಿ.ರೋಡ್ ಮತ್ತಿತರರಿದ್ದರು.