ಚಾರ್ಮಾಡಿ ಘಾಟ್ ರಸ್ತೆ ಬಂದ್ : ಪ್ರಶಂಸೆಗೆ ಪಾತ್ರವಾದ ಪೊಲೀಸರ ನಡೆ
ಉಜಿರೆ, ಜೂನ್ 12 : ಚಾರ್ಮಾಡಿ ಘಾಟ್ ನ ರಸ್ತೆ ಬಂದ್ ಆಗಿ ಮಧ್ಯೆ ಸಿಲುಕಿದ್ದ ಪ್ರಯಾಣಿಕರಿಗೆ ನೀರು ಬಿಸ್ಕೆಟ್ ನೀಡಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಾರ್ಮಾಡಿ ಘಾಟ್ ನ 2ನೇ ಹಾಗೂ 3ನೇ ತಿರುವಿನ ರಸ್ತೆಯಲ್ಲಿ ಗುಡ್ಡದ ಮಣ್ಣು ಕುಸಿದಿದ್ದರಿಂದ ಘಾಟ್ ರಸ್ತೆಯು ಸಂಪೂರ್ಣ ಬಂದ್ ಆಗಿತ್ತು. ಇದರ ಪರಿಣಾಮವಾಗಿ ನೂರಾರು ವಾಹನಗಳು ಮುಂದೆ ಹೋಗಲೂ ಸಾಧ್ಯವಾಗದೆ ಹಿಂತಿರುಗಿ ಬರಲು ಸಾಧ್ಯವಾಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇದಕ್ಕೆ ತಕ್ಷಣವೇ ಸ್ಪಂದಿಸಿದ ದಕ್ಷಿಣ ಕನ್ನಡ ಪೊಲೀಸರು ಬದಲಿ ರಸ್ತೆಯಲ್ಲಿ ಸಂಚಾರಕ್ಕೆ ಅನುಮಾಡಿ ಕೊಟ್ಟರು. ಆದರೆ ಹೆಚ್ಚಿನ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದು ಇದನ್ನು ತೆರವುಗೊಳಿಸಲು ಪೊಲೀಸರು ಹರಸಾಹಸಪಟ್ಟರು.
ಇಲ್ಲಿ ಸಿಲುಕಿದ್ದ ವಾಹನಗಳಲ್ಲಿ ಮಕ್ಕಳು, ವೃದ್ಧರು ಹಾಗೂ ಸಕ್ಕರೆ ಖಾಯಿಲೆ ಇರುವಂತವರು ಯಾವುದೇ ತರಹದ ನೀರು ಆಹಾರ ಸಿಗದೇ ಪರದಾಡುತ್ತಿದ್ದರು. ಇದನ್ನು ಸೂಕ್ಷ್ಮ ವಾಗಿ ಗಮನಿಸಿದ ದ.ಕ ಪೊಲೀಸರು ದಾರಿ ಮಧ್ಯೆ ಸಿಲುಕಿದ್ದ ಪ್ರಯಾಣಿಕರಿಗೆ ಕುಡಿಯಲು ನೀರು ಹಾಗೂ ಲಘು ಆಹಾರವಾಗಿ ಬಿಸ್ಕೆಟನ್ನು ನೀಡಿದರು. ಈ ಮೂಲಕ ಪೊಲೀಸರು ಮಾನವೀಯ ಎತ್ತಿ ಹಿಡಿದ್ದಾರೆ. ಈ ಕೆಲಸದಿಂದ ಸಾರ್ವಜನಿಕ ವಲಯದಲ್ಲಿ ದ.ಕ. ಪೊಲೀಸರು ಭಾರೀ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಏಕಮುಖ ಸಂಚಾರ ಆರಂಭ
ಇದೀಗ ರಸ್ತೆಯ ಒಂದು ಭಾಗದಲ್ಲಿ ಕುಸಿದಿದ್ದ ಮಣ್ಣನ್ನು ತೆರವುಗೊಳಿಸಿದ್ದು ರಸ್ತೆಯಲ್ಲಿ ಏಕಮುಖ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಆದಷ್ಟು ಶೀಘ್ರವಾಗಿ ಮಣ್ಣನ್ನು ತೆರವುಗೊಳಿಸಿ ದ್ವಿಮುಖ ಸಂಚಾರಕ್ಕಾಗಿ ರಸ್ತೆಯು ಬಿಟ್ಟುಕೊಡುವುದಾಗಿ ದ ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ ತಿಳಿಸಿದ್ದಾರೆ.