ನೀಟ್ ನಲ್ಲಿ ಉನ್ನತ ರ‍್ಯಾಂಕ್ ಪಡೆದು ವೈದ್ಯನಾಗುವ ಕನಸು ನನಸು ಮಾಡಿಕೊಂಡ ಛಲದಂಕಮಲ್ಲ ಸಲ್ಮಾನ್

Update: 2018-06-12 14:52 GMT

ಮಂಗಳೂರು, ಜೂ.12: ಸಣ್ಣ ವಯಸ್ಸಿನಲ್ಲಿಯೇ ವೈದ್ಯನಾಗುವ ಕನಸು ಕಂಡಿದ್ದ ಈ ವಿದ್ಯಾರ್ಥಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗಳಿಸಿದ ಅಂಕ ಎಂಬಿಬಿಎಸ್ ಸೀಟು ಗಿಟ್ಟಿಸಿಕೊಳ್ಳಲು ಸಾಕಾಗಲಿಲ್ಲ. ಉತ್ತಮ ಅಂಕ ಗಳಿಸಿದ್ದರೂ ಎಂಬಿಬಿಎಸ್ ಕೋರ್ಸ್ ಗೆ ಸೇರಲು ಅಗತ್ಯವಿದ್ದ ಅಂಕಗಳಿರಲಿಲ್ಲ. ಆದರೆ ಇಂಜಿನಿಯರಿಂಗ್ ಗೆ ಅಗತ್ಯವಿದ್ದ ಸಿಇಟಿ ರ್ಯಾಂಕ್ ಗಿಟ್ಟಿಸಿಕೊಂಡಿದ್ದರಿಂದ ಸರಕಾರಿ ಇಂಜಿನಿಯರಿಂಗ್ ಸೀಟು ಸುಲಭವಾಗಿ ಸಿಗುತ್ತಿತ್ತು. ಆದರೆ ವೈದ್ಯನಾಗಬೇಕೆಂಬ ಆತನ ಕನಸು ಹಾಗೇ ಉಳಿದುಕೊಂಡಿತ್ತು. ಛಲ ಬಿಡದೆ ನೀಟ್ ಕೋಚಿಂಗ್ ಪಡೆದ ಈ ವಿದ್ಯಾರ್ಥಿ ಇದೀಗ ನೀಟ್ ನಲ್ಲಿ ಉನ್ನತ ರ್ಯಾಂಕ್ ಪಡೆದು ವೈದ್ಯನಾಗುವತ್ತ ಹೆಜ್ಜೆಯಿರಿಸಿದ್ದಾನೆ.

ಈತನ ಹೆಸರು ಮುಹಮ್ಮದ್ ರಹ್ಮಾನ್ ಸಲ್ಮಾನ್. ಉಳ್ಳಾಲದ ಮೇಲಂಗಡಿ ನಿವಾಸಿ. ಹಝ್ರತ್ ಸೈಯದ್ ಮದನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಹಾಗು ಪ್ರೌಢಶಾಲಾ ಶಿಕ್ಷಣ ಪಡೆದ ಸಲ್ಮಾನ್, ನಂತರ ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನೂ ಪಡೆದ. ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದರೂ ವೈದ್ಯಕೀಯ ಶಿಕ್ಷಣಕ್ಕಾಗಿ ಸರಕಾರಿ ಸೀಟು ಸಿಗಲಿಲ್ಲ.

“ನಾನು ದ್ವಿತೀಯ ಪಿಯುಸಿಯಲ್ಲೇ ನೀಟ್ ಪರೀಕ್ಷೆ ಬರೆದಿದ್ದೆ. ದ್ವಿತೀಯ ಪರೀಕ್ಷೆಯಲ್ಲಿ ಅಂಕಗಳ ಕೊರತೆಯಿಂದಾಗಿ ವೈದ್ಯಕೀಯ ಶಿಕ್ಷಣಕ್ಕೆ ಸರಕಾರಿ ಸೀಟು ಸಿಗಲಿಲ್ಲ” ಎಂದು ಹೇಳುತ್ತಾರೆ ರಹ್ಮಾನ್ ಸಲ್ಮಾನ್.

ಸಣ್ಣ ಅಂಗಡಿಯೊಂದರ ಮಾಲಕರಾಗಿದ್ದ ರಹ್ಮಾನ್ ಸಲ್ಮಾನ್ ರ ತಂದೆ ಪುತ್ರನ ಕನಸಿಗೆ ಜೊತೆಯಾದರು. ತನ್ನ ಪುತ್ರನ ಕನಸನ್ನು ಉಳ್ಳಾಲದ ಆಗಿನ ಶಾಸಕರಾಗಿದ್ದ ಯು.ಟಿ.ಖಾದರ್ ರಿಗೆ ವಿವರಿಸಿದರು. ಕೂಡಲೇ ಸ್ಪಂದಿಸಿದ ಯು.ಟಿ.ಖಾದರ್ ಬೆಂಗಳೂರಿನ ಶಾಹೀನ್ ಕಾಲೇಜಿನ ಆಡಳಿತ ನಿರ್ದೇಶಕರ ಜೊತೆ ಮಾತುಕತೆ ನಡೆಸಿ ರಹ್ಮಾನ್ ಸಲ್ಮಾನ್ ಗೆ ಅವಕಾಶ ನೀಡುವಂತೆ ಕೇಳಿಕೊಂಡರು.

“ಯು.ಟಿ.ಖಾದರ್ ಅವರು ಆ ಸಂದರ್ಭ ನಮಗೆ ನೆರವಾದರು. ಬೆಂಗಳೂರಿನ ಶಾಹೀನ್ ಸಂಸ್ಥೆ ನನಗೆ 1 ವರ್ಷಗಳ ಕಾಲ ಉಚಿತ ನೀಟ್ ತರಬೇತಿ ನೀಡಿತು. ಇದೀಗ ನೀಟ್ ನಲ್ಲಿ 8348ನೆ ರ್ಯಾಂಕ್ ಬಂದಿದೆ. ಸಣ್ಣ ವಯಸ್ಸಿನಲ್ಲಿ ಐಎಎಸ್ ಮಾಡುವ ಆಸೆಯೂ ಇತ್ತು. ಇದೀಗ ವೈದ್ಯಕೀಯ ಕ್ಷೇತ್ರದಲ್ಲೇ ಮುಂದುವರಿಯಲಿದ್ದೇನೆ. ಮಂಗಳೂರು ಅಥವಾ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಮುಂದುವರಿಸಲಿದ್ದೇನೆ. ಸಮಾಜ ಸೇವೆಗಾಗಿಯೇ ಈ ಕ್ಷೇತ್ರವನ್ನು ಆಯ್ದುಕೊಂಡಿದ್ದೇನೆ. ನನ್ನ ಶಿಕ್ಷಣಕ್ಕೆ ತಂದೆ ನಝೀರ್ ಹಾಗು ತಾಯಿ ಖತೀಜಾ ಸಹಕಾರ ನೀಡಿದ್ದಾರೆ” ಎಂದು ರಹ್ಮಾನ್ ಸಲ್ಮಾನ್ ಹೇಳುತ್ತಾರೆ.  

ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರಿನ ಶಾಹೀನ್ ಕಾಲೇಜಿನ ಆಡಳಿತ ನಿರ್ದೇಶಕ ಅಬ್ದುಲ್ ಸುಭಾನ್, ರಹ್ಮಾನ್ ಸಲ್ಮಾನ್ ನ ಸಾಧನೆಯನ್ನು ಪ್ರಶಂಶಿಸಿಸಿದರು. “ಇಲ್ಲಿನ ಪರಿಣತ ಸಿಬ್ಬಂದಿ ಹಾಗು ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ಸೂಕ್ತ ವೇದಿಕೆ ಒದಗಿಸುತ್ತದೆ ಎನ್ನುವ ಅವರು, ಕನಸುಗಳನ್ನು ಬೆನ್ನುಹತ್ತಲು ಆರ್ಥಿಕ ಸ್ಥಿತಿಗತಿ ಅಡ್ಡಿಯಾಗಬಾರದು” ಎಂದು ರಹ್ಮಾನ್ ಸಲ್ಮಾನ್ ಗೆ ಸಂಸ್ಥೆಯು ಉಚಿತ ಕೋಚಿಂಗ್ ನೀಡಿದ್ದನ್ನು ಉಲ್ಲೇಖಿಸಿ ಹೇಳಿದ್ದಾರೆ.

ರಹ್ಮಾನ್ ಸಲ್ಮಾನ್ ನಂತಹ ಹಲವು ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆ ಒದಗಿಸುವ ಸಲುವಾಗಿ ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ (ನೀಟ್-2018 ಪರೀಕ್ಷೆಯಲ್ಲಿ 350ಕ್ಕಿಂತ ಅಧಿಕ ಅಂಕ ಗಳಿಸಿದವರಿಗೆ) ಬೆಂಗಳೂರಿನ ಶಾಹಿನ್ ಪಿಯು ಕಾಲೇಜು ಉಚಿತ ಕೋಚಿಂಗ್ ನೀಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News