ಉಡುಪಿ ಜಿಲ್ಲೆಯಲ್ಲಿ ಮೂರು ಜೀವಹಾನಿ, ಮೆಸ್ಕಾಂಗೆ 2.15 ಕೋಟಿ ರೂ.ನಷ್ಟ

Update: 2018-06-12 15:31 GMT

ಉಡುಪಿ, ಜೂ.12: ಜಿಲ್ಲೆಯಲ್ಲಿ ಮಳೆ ಗಾಳಿಯಿಂದಾಗಿ ಸಂಭವಿಸಿರುವ ಜೀವ ಹಾನಿ ಮತ್ತು ಸೊತ್ತುಗಳ ಹಾನಿಯ ಸಮಗ್ರ ವರದಿಯನ್ನು ಶೀಘ್ರವೇ ನೀಡುವಂತೆ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರಿಗೆ ಅಪರ ಜಿಲ್ಲಾಧಿಕಾರಿ ಅನುರಾಧ ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಗುರುವಾರ ಮುಖ್ಯಮಂತ್ರಿಗಳು ಸಭೆ ಕರೆದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಈವರೆಗಿನ ಪ್ರಾಕೃತಿಕ ವಿಕೋಪದಿಂದಾದ ಹಾನಿಯ ಕುರಿತಂತೆ ಸಭೆಯು ಇಂದು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಗಳ ಅಧ್ಯಕ್ಷತೆಯಲ್ಲಿ ನಡೆಯಿತು.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 3 ಮಾನವ ಜೀವಹಾನಿ ಸಂಭವಿಸಿದ್ದು, 14 ಲಕ್ಷ ರೂ.ಗಳ ಪರಿಹಾರವನ್ನು ಪಾವತಿಸಲಾಗಿದೆ. ಒಟ್ಟು 6 ಜಾನುವಾರುಗಳು ಮೃತಪಟ್ಟಿದ್ದು 1.08 ಲಕ್ಷ ರೂ.ಗಳ ಪರಿಹಾರವನ್ನು ವಿತರಿಸಲಾಗಿದೆ. 492 ವಾಸದ ಮನೆಗಳಿಗೆ ಹಾನಿಯಾಗಿದ್ದು, ಪರಿಹಾರವಾಗಿ 21.97 ಲಕ್ಷ ರೂ. ನೀಡಲಾಗಿದೆ. ತೋಟಗಾರಿಕೆ ಬೆಳೆ ಹಾನಿಯಲ್ಲಿ 1.50 ಲಕ್ಷ ರೂ.ಗಳನ್ನು 46 ಪ್ರಕರಣಗಳಲ್ಲಿ ವಿತರಿಸಿದ್ದು, ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಈವರೆಗೆ ಒಟ್ಟು 547 ಪ್ರಕರಣಗಳಲ್ಲಿ 38.55 ಲಕ್ಷ ರೂ.ಗಳನ್ನು ಪರಿಹಾರ ರೂಪದಲ್ಲಿ ಪಾವತಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವಿವರಿಸಿದರು.

ಇದಲ್ಲದೆ ನಗರಸಭೆ, ಪುರಸಭೆ, ಜಿಲ್ಲಾ ಪಂಚಾಯತ್, ಲೋಕೋಪಯೋಗಿ ಇಲಾಖೆಯಿಂದ ಹಾನಿಯ ವರದಿ ನೀಡಲು ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರಲ್ಲದೆ, ಎಲ್ಲ ತಹಶೀಲ್ದಾರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಆಗಿರುವ ನಷ್ಟದ ಅಂದಾಜು ಮಾಹಿತಿ ಮತ್ತು ಪರಿಹಾರ ಕೋರಿ ತ್ಷಣವೇ ವರದಿ ನೀಡಲು ಸೂಚಿಸಿದರು.

ಇದಲ್ಲದೆ ನಗರಸೆ,ಪುರಸೆ, ಜಿಲ್ಲಾ ಪಂಚಾಯತ್, ಲೋಕೋಪಯೋಗಿ ಇಲಾಖೆಯಿಂದ ಹಾನಿಯ ವರದಿ ನೀಡಲು ಅಪರ ಜಿಲ್ಲಾಧಿಕಾರಿಗಳು ಸೂಚಿಸಿ ದರಲ್ಲದೆ, ಎಲ್ಲ ತಹಶೀಲ್ದಾರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಆಗಿರುವ ನಷ್ಟದ ಅಂದಾಜು ಮಾಹಿತಿ ಮತ್ತು ಪರಿಹಾರ ಕೋರಿ ತಕ್ಷಣವೇ ವರದಿ ನೀಡಲು ಸೂಚಿಸಿದರು. ಮಳೆಯಿಂದಾಗುವ ಹಾನಿ ನಿಭಾಯಿಸಲು ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಗ್ರಾಪಂವಾರು ಗ್ರಾಮೀಣ ಮಟ್ಟದ ತಂಡ ರಚಿಸಲಾಗಿದೆ. ಜೀವ ಹಾನಿ ತಡೆಗೆ ಅಗತ್ಯ ಸುರಕ್ಷಾ ಕ್ರಮ ಕೈಗೊಳ್ಳುವ ಕುರಿತು ಸುತ್ತೋಲೆಗಳನ್ನು ಹೊರಡಿಸಲಾಗಿದೆ. ಜಿಲ್ಲೆಯ ಅಗ್ನಿಶಾಮಕ ಠಾಣೆಗಳಿಗೆ 7.50 ಲಕ್ಷ ರೂ.ಗಳ ರಕ್ಷಣಾ ಸಲಕರಣೆಗಳನ್ನು ಒದಗಿಸಲಾಗಿದೆ ಎಂದರು.

ಮೆಸ್ಕಾಂಗೆ 2.15 ಕೋಟಿ ರೂ. : ಜಿಲ್ಲೆಯಲ್ಲಿ ಮೆಸ್ಕಾಂನ ಸುಮಾರು 1,896 ವಿದ್ಯುತ್ ಕಂಬಗಳು ಬಿದ್ದಿದ್ದು, 240 ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ಹೋಗಿವೆ. ಒಟ್ಟು 214.06 ಲಕ್ಷ ರೂ.ಗಳ ಅಂದಾಜು ನಷ್ಟ ಸಂಭವಿಸಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದರು. ಕಾಪುವಿನಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದ್ದು, ನೀರು ನಿಲ್ಲದಂತೆ ಚರಂಡಿಯನ್ನು ತೆರವುಗೊಳಿಸಿದ್ದರಿಂದ 20 ಲಕ್ಷ ರೂ. ನಷ್ಟವಾಗಿದೆ ಎಂದು ಕಾಪು ಪುರಸಬೆ ಮುಖ್ಯಾಧಿಕಾರಿ ರಾಯಪ್ಪ ಸಭೆಗೆ ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ಸೇರಿದ 81.83 ಕಿ.ಮೀ ಉದ್ದದ ರಸ್ತೆಗಳು ಮಳೆಯಿಂದ ಹಾಳಾಗಿದ್ದು, ಈವರೆಗೆ 426 ಲಕ್ಷ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ ಎಂದು ಮುಖ್ಯ ಇಂಜಿನಿಯರ್ ವಿವರಿಸಿದರು. ತೋಟಗಾರಿಕಾ ಉಪನಿರ್ದೇಶಕರು ಮಾಹಿತಿ ನೀಡಿ, 96 ಪ್ರಕರಣಗಳಲ್ಲಿ 17.287 ಎಕರೆ ವಿಸ್ತೀರ್ಣದಲ್ಲಿ 22.87 ಲಕ್ಷ ರೂ.ಗಳ ಬೆಳೆ ನಷ್ಟದ ಅಂದಾಜು ಮಾಡಲಾಗಿದೆ ಎಂದರು.

ಒತ್ತಿನೆಣೆಯಲ್ಲಿ ಭೂಕುಸಿತ ಸಂಭವಿಸಿಲ್ಲ ಎಂದು ಸ್ಪಷ್ಟ ಪಡಿಸಿದ ನವಯುಗ್ ಅಧಿಕಾರಿಗಳು, ದೂರುಗಳಿಗೆ ಸಕಾರಾತ್ಮಕವಾಗಿ ಸ್ಪಂಧಿಸಿರುವುದಾಗಿ ಅಪರ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟನೆ ನೀಡಿದರು. ರಸ್ತೆಯ ಪಕ್ಕದ ಮನೆಗಳಿಗೆ ಮಣ್ಣು ನೀರಿನೊಂದಿಗೆ ಬಂದಿರುವುದನ್ನು ತಕ್ಷಣವೇ ತೆರವುಗೊಳಿಲಾಗಿದೆ ಎಂದು ಅವರು ವಿವರಿಸಿದರು. ನಗರ ಪ್ರದೇಶ ವ್ಯಾಪ್ತಿಯಲ್ಲಿ ಕೃತಕ ನೆರೆ ತಡೆಯಲು ಚರಂಡಿ ಶುಚಿ ಗೊಳಿಸಲು, ಸಾಂಕ್ರಾಮಿಕ ರೋಗ ತಡೆಗೆ ಸಂಬಂಧ ಪಟ್ಟ ಇಲಾಖೆ ಸಜ್ಜಾಗಿರ ಬೇಕೆಂದು ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ, ಸಹಾಯಕ ಆಯುಕ್ತ ಭೂಬಾಲನ್, ನಗರಸಭೆ ಆಯುಕ್ತ ಜನಾರ್ಧನ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News