ಅಸ್ಸಾಮಿನ ಏಕೈಕ ಮುಸ್ಲಿಂ ಬಿಜೆಪಿ ಶಾಸಕನಿಗೆ ಕೊಲೆ ಬೆದರಿಕೆ

Update: 2018-06-12 16:40 GMT

ಗುವಾಹಟಿ,ಜೂ.12: ಅಸ್ಸಾಮಿನ ಏಕೈಕ ಮುಸ್ಲಿಂ ಬಿಜೆಪಿ ಶಾಸಕರಾಗಿರುವ ಅಮಿನುಲ್ ಹಕ್ ಲಾಸ್ಕರ್ ಅವರಿಗೆ ಬೆದರಿಕೆ ಪತ್ರವೊಂದು ಬಂದಿದ್ದು,15 ದಿನಗಳಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡದಿದ್ದರೆ ಘೋರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದರು.

ಕಾಚಾರ್ ಜಿಲ್ಲೆಯ ಸೋನಾಯಿ ಶಾಸಕರಾಗಿರುವ ಲಾಸ್ಕರ್ ಶನಿವಾರ ಈ ಹಸ್ತಲಿಖಿತ ಪತ್ರವನ್ನು ಸ್ವೀಕರಿಸಿದ್ದು,ಅದರ ಜೊತೆಗೆ ಪಾಯಿಂಟ್ 32 ಪಿಸ್ತೂಲಿನ ಎರಡು ಗುಂಡುಗಳನ್ನೂ ಇರಿಸಲಾಗಿತ್ತು. ಪತ್ರವನ್ನು ಮೇ 22ರಂದು ಕರೀಮಗಂಜ್‌ನಲ್ಲಿ ಅಂಚೆಗೆ ಹಾಕಲಾಗಿತ್ತು.

 ತಾನು ಮುಸ್ಲಿಮನಾಗಿದ್ದುಕೊಂಡು ಬಿಜೆಪಿ ಪರವಾಗಿರುವುದನ್ನು ಕೆಂಪು ಅಕ್ಷರಗಳಲ್ಲಿ ಬರೆಯಲಾಗಿರುವ ಈ ಪತ್ರವು ಆಕ್ಷೇಪಿಸಿದೆ ಎಂದು ಲಾಸ್ಕರ್(52) ತಿಳಿಸಿದರು. ಈವರೆಗೂ ಹೆಸರನ್ನೇ ಕೇಳಿರದ ‘ಸೇವ್ ಸೆಕ್ಯೂರ್ ಆ್ಯಂಡ್ ಡೆವಲಪ್‌ಮೆಂಟ್ ಫೋರ್ಸ್ ಆಫ್ ಮುಸ್ಲಿಮ್ಸ್’ನ ಬರಾಕ್ ವ್ಯಾಲಿ ಘಟಕವು ಈ ಪತ್ರವನ್ನು ಕಳುಹಿಸಿದೆ ಎನ್ನಲಾಗಿದೆ.

ಕಳೆದ ಮೇ ತಿಂಗಳಲ್ಲಿ ಜಂಟಿ ಸಂಸದೀಯ ಸಮಿತಿಯು ಸಾರ್ವಜನಿಕ ಅಹವಾಲುಗಳನ್ನು ಆಲಿಸಲು ಬರಾಕ್ ವ್ಯಾಲಿಗೆ ಭೇಟಿ ನೀಡಿದ್ದಾಗ ಪೌರತ್ವ (ತಿದ್ದುಪಡಿ)ಮಸೂದೆ,2016ನ್ನು ತಾನು ವಿರೋಧಿಸಿರಲಿಲ್ಲ ಎಂದು ಪತ್ರವು ಆರೋಪಿಸಿದೆ ಎಂದ ಅವರು,ರಾಜ್ಯ ಸರಕಾರದ ನೀತಿಗಳಿಂದ ಸಮಸ್ಯೆ ಎದುರಿಸುತ್ತಿರುವ ಅಕ್ರಮ ಉದ್ಯಮ ಸಿಂಡಿಕೇಟ್‌ಗಳು ಅಥವಾ ಭೂ ಮಾಫಿಯಾ ಗುಂಪುಗಳು ಈ ಪತ್ರವನ್ನು ಕಳುಹಿಸಿರಬಹುದು ಎಂದರು.

ಲಾಸ್ಕರ್ ಅವರು ಈ ಬಗ್ಗೆ ಸಿಲ್ಚಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬೆದರಿಕೆಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಅವರಿಗೆ ಭದ್ರತೆಯನ್ನು ಹೆಚ್ಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News