ಜೂನ್ 15ರಂದು ಅಮೆರಿಕದಿಂದ ಗೋವಾಕ್ಕೆ ಮರಳಲಿರುವ ಪಾರಿಕ್ಕರ್?
Update: 2018-06-12 22:15 IST
ಪಣಜಿ, ಜೂ.12: ಸದ್ಯ ಅಮೆರಿಕದಲ್ಲಿ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿರುವ ಗೋವಾದ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಜೂನ್ 15ರಂದು ಸ್ವದೇಶಕ್ಕೆ ಮರಳುವ ನಿರೀಕ್ಷೆಯಿದೆ ಎಂದು ಹಿರಿಯ ಬಿಜೆಪಿ ಶಾಸಕ ನೀಲೇಶ್ ಕಬ್ರಾಲ್ ತಿಳಿಸಿದ್ದಾರೆ. ಆದರೆ ಪಾರಿಕ್ಕರ್ ಜೂನ್ 15ರಂದು ಗೋವಾಕ್ಕೆ ಮರಳುವುದು ಇನ್ನೂ ದೃಢಪಟ್ಟಿಲ್ಲ ಎಂದು ಪಕ್ಷದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರು ಜೂನ್‌ನಲ್ಲಿ ಗೋವಾಕ್ಕೆ ಮರಳುತ್ತಾರೆ ಎಂಬ ಮಾಹಿತಿಯಿದ್ದರೂ ಇನ್ನೂ ವಿಮಾನದ ಟಿಕೆಟ್ ಬುಕ್ ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ. ಗೃಹ ಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿ ಪಾರಿಕ್ಕರ್ ಜೂನ್ 18ರಂದು ನಡೆಯಲಿರುವ ಕ್ರಾಂತಿದಿನದ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ. ಈ ಬಗ್ಗೆಯೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.