ಯುವಜನರಿಗೆ ಉದ್ಯೋಗ ಒದಗಿಸುವ ‘ಕಾಮ್ ಕಿ ಬಾತ್’ ಬಗ್ಗೆ ಪ್ರಧಾನಿ ಮಾತಾಡಲಿ: ರಾಹುಲ್ ಗಾಂಧಿ

Update: 2018-06-12 16:47 GMT

ಥಾಣೆ, ಜೂ. 12: ಯುವಜನಾಂಗಕ್ಕೆ ಉದ್ಯೋಗ ಹಾಗೂ ರೈತರ ಬಗ್ಗೆ ಮೌನ ವಹಿಸಿರುವ ಪ್ರಧಾನಿ ಮೋದಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ ಹಾಗೂ ನನ್ನ ಹೋರಾಟ ಸರಕಾರಗಳ ನೀತಿಯ ವಿರುದ್ಧ ಎಂದಿದ್ದಾರೆ. ಆರೆಸ್ಸೆಸ್ ಕಾರ್ಯಕರ್ತ ದಾಖಲಿಸಿದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ಇಲ್ಲಿನ ಭೀವಂಡಿ ಪಟ್ಟಣದ ನ್ಯಾಯಾಲಯಕ್ಕೆ ಹಾಜರಾಗುವ ಮೊದಲು ರಾಹುಲ್, ಗಾಂಧಿ, “ನಿಮಗೆ ಎಷ್ಟು ಸಾಧ್ಯವಿದೆಯೋ ಅಷ್ಟು ಪ್ರಕರಣಗಳನ್ನು ದಾಖಲಿಸಿ. ನಾನು ಹೆದರಲಾರೆ” ಎಂದು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೆ ಸವಾಲೆಸೆದರು. ‘‘ನಮ್ಮ ಹೋರಾಟ ಪ್ರಧಾನಿ ಅವರ ನೀತಿಯ ವಿರುದ್ಧ. ರೈತರು ಹತಾಶರಾಗಿದ್ದರೆ. ಯುವಜನಾಂಗದ ಉದ್ಯೋಗಗಳ ಬಗ್ಗೆ ಪ್ರಧಾನಿ ಅವರು ಮಾತನಾಡುತ್ತಿಲ್ಲ. ಈ ಸರಕಾರ ಶ್ರೀಮಂತರ ಬಗ್ಗೆ ಮಾತ್ರ ಮಾತನಾಡುತ್ತಿದೆ.’’ ಎಂದು ಭೀವಂಡಿ ನ್ಯಾಯಾಲಯದ ಹೊರಭಾಗದಲ್ಲಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಮೋದಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮದ ಬಗ್ಗೆ ಅವರು ವ್ಯಂಗ್ಯವಾಡಿದರು ಹಾಗೂ ಯುವಜನಾಂಗಕ್ಕೆ ಉದ್ಯೋಗ ನೀಡುವ ಹಾಗೂ ರೈತರಿಗೆ ಸುರಕ್ಷೆ ನೀಡುವ ‘ಕಾಮ್ ಕಿ ಬಾತ್’ ಬಗ್ಗೆ ಪ್ರಧಾನಿ ಅವರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಆರೆಸ್ಸೆಸ್ ಹಾಗೂ ಬಿಜೆಪಿ ಎಷ್ಟು ಸಾಧ್ಯವೊ ಅಷ್ಟು ಪ್ರಕರಣಗಳನ್ನು ನನ್ನ ವಿರುದ್ಧ ದಾಖಲಿಸಲಿ. ನಮ್ಮ ಹೋರಾಟ ಸಿದ್ಧಾಂತದ ವಿರುದ್ಧ. ನಾವು ಹೋರಾಟ ಮಾಡುತ್ತೇವೆ ಹಾಗೂ ಜಯ ಗಳಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.

2014ರಲ್ಲಿ ಆರೆಸ್ಸೆಸ್ ಕಾರ್ಯಕರ್ತ ರಾಜೇಶ್ ಕುಂಟೆ ಅವರು ದಾಖಲಿಸಿದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ದಾಖಲಿಸಲು ಭೀವಂಡಿ ನ್ಯಾಯಾಲಯ ಮೇ 2ರಂದು ರಾಹುಲ್ ಗಾಂಧಿ ಅವರಿಗೆ ಸೂಚಿಸಿತ್ತು. ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಅವರು, ಮಹಾತ್ಮಾ ಗಾಂಧಿ ಅವರ ಹತ್ಯೆಯ ಹಿಂದೆ ಆರ್‌ಎಸ್‌ಎಸ್ ಕೈವಾಡ ಇತ್ತು ಎಂದು ಭಾಷಣದಲ್ಲಿ ಹೇಳಿದ್ದರು. ಇದನ್ನು ನೋಡಿದ್ದ ರಾಜೇಶ್ ಕುಂಟೆ ಪ್ರಕರಣ ದಾಖಲಿಸಿದ್ದರು.

ರಾಹುಲ್ ಗಾಂಧಿ ವಿರುದ್ಧ ಆರೋಪ ರೂಪಿಸಿದ ಭೀವಂಡಿ ನ್ಯಾಯಾಲಯ

ಆರೆಸ್ಸೆಸ್ ಕಾರ್ಯಕರ್ತ ದಾಖಲಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಕುರಿತಂತೆ ಮಹರಾಷ್ಟ್ರದ ಭೀವಂಡಿ ಮಾಜಿಸ್ಟ್ರೇಟ್ ನ್ಯಾಯಾಲಯ ಮಂಗಳವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಆರೋಪ ರೂಪಿಸಿದೆ. 2014ರ ಚುನಾವಣಾ ರ್ಯಾಲಿಯ ಸಂದರ್ಭ ಮಾಡಿದ ಭಾಷಣದಲ್ಲಿ ರಾಹುಲ್ ಗಾಂಧಿ ಅವರು ಮಹಾತ್ಮಾ ಗಾಂಧಿ ಹತ್ಯೆ ಹಿಂದೆ ಆರೆಸ್ಸೆಸ್ ಕೈವಾಡ ಇತ್ತು ಎಂದು ಹೇಳಿದ್ದರು ಎಂದು ಆರೆಸ್ಸೆಸ್ ಕಾರ್ಯಕರ್ತ ಆರೋಪಿಸಿದ್ದರು. ಮ್ಯಾಜಿಸ್ಟ್ರೇಟ್ ರಾಹುಲ್ ಗಾಂಧಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 499 ಹಾಗೂ 500 ಅಡಿಯಲ್ಲಿ ಆರೋಪ ರೂಪಿಸಿದರು. ರಾಹುಲ್ ಗಾಂಧಿ ವಿರುದ್ಧದ ಆರೋಪ ಓದಿ, ವಿವರಿಸಿದ ಬಳಿಕ ನ್ಯಾಯಾಲಯ ಅವರಲ್ಲಿ ‘‘ಈ ತಪ್ಪನ್ನು ಒಪ್ಪಿಕೊಳ್ಳುತ್ತೀರಾ’’ ಎಂದು ಕೇಳಿತು. ಅದಕ್ಕೆ ಅವರು ‘‘ಇಲ್ಲ ಒಪ್ಪಿಕೊಳ್ಳಲಾರೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News