×
Ad

ಪುತ್ತೂರು; ಗಾಳಿ ಮಳೆಗೆ 101 ಕಂಬಗಳು ಧರೆಗೆ; ಮೆಸ್ಕಾಂಗೆ 16 ಲಕ್ಷ ರೂ. ನಷ್ಟ

Update: 2018-06-12 22:35 IST

ಪುತ್ತೂರು, ಜೂ. 12: ಪುತ್ತೂರು ಮೆಸ್ಕಾಂ ಉಪವಿಭಾಗದ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಗಾಳಿ ಮಳೆಗೆ 101 ವಿದ್ಯುತ್ ಕಂಬಗಳು ಮುರಿದು ಬಿದ್ದು, ಸುಮಾರು ರೂ. 16 ಲಕ್ಷ ನಷ್ಟ ಸಂಭವಿಸಿದೆ ಎಂದು ಮೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ ನರಸಿಂಹ ತಿಳಿಸಿದ್ದಾರೆ.

ಪುತ್ತೂರು ಉಪವಿಭಾಗದಲ್ಲಿ ಅತ್ಯಂತ ಉದ್ದದ ವಿದ್ಯುತ್ ಲೈನ್ ಗಳಿದ್ದು, ಪುತ್ತೂರಿನಿಂದ ಸುಬ್ರಹ್ಮಣ್ಯದ ಸುಮಾರು 50 ಕಿಮೀ, ಸುಳ್ಯ ತಾಲೂಕಿನ ಮಡಪ್ಪಾಡಿ 4ಂಕಿಮೀ ದೂರಕ್ಕೂ ವಿದ್ಯುತ್ ಲೈನ್ ಗಳನ್ನು ಎಳೆಯಲಾಗಿದೆ. ಇದರಲ್ಲಿ ಬಹುತೇಕ ಲೈನ್ ಗಳು ಕಾಡಿನ ಮಧ್ಯೆಯೇ ಹಾದು ಹೋಗಿವೆ. ಹಾಗಾಗಿ ಮಳೆಯ ಅಬ್ಬರಕ್ಕೆ ಮರಗಳು ಬಿದ್ದು ಅನಿವಾರ್ಯವಾಗಿ ವಿದ್ಯುತ್ ಸಂಪರ್ಕ ನೀಡುವಲ್ಲಿ ವ್ಯತ್ಯಯವಾಗಿದೆ. ಆದರೆ ಇದನ್ನು ಸಮರ್ಪಕಗೊಳಿಸಲು ಎಲ್ಲಾ ಬಗೆಯ ಶ್ರಮವನ್ನು ಹಾಕಲಾಗುತ್ತಿದೆ. ಜನತೆಗೆ ಅಗತ್ಯವಾದ ಮೂಲ ಸಮಸ್ಯೆಗಳ ನಿವಾರಣಾ ಕೆಲಸಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದೇವೆ. ಕೆಲವು ಭಾಗದಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಗಳಿಗೂ ಹಾನಿಯಾಗಿದ್ದರೂ, ಈ ಸಮಸ್ಯೆ ಗಂಭೀರವಾಗಿಲ್ಲ ಎಂದು ತಿಳಿಸಿದರು.

ಈಗಾಗಲೇ ಉಪವಿಭಾಗದ ವಿದ್ಯುತ್ ಲೈನ್ ಹೋದ ಭಾಗದಲ್ಲಿ ಜಂಗಲ್ ಕಟ್ಟಿಂಗ್ ನಡೆಸಲು 50 ಮಂದಿಯ ತಂಡವನ್ನು ಟೆಂಡರ್ ಮೂಲಕ ರಚಿಸಲಾಗಿದೆ. ಇವರಿಗಾಗಿ ಎರಡು ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. ಈ ತಂಡ ವಿವಿಧ ಭಾಗದಲ್ಲಿ ವಿದ್ಯುತ್ ಲೈನ್ ಗಳ ಬದಿಯಲ್ಲಿರುವ ಮರ ಹಾಗೂ ಗೆಲ್ಲುಗಳನ್ನು ಸವರುವ ಕೆಲಸ ಮಾಡಲಿದ್ದು, ವಿದ್ಯುತ್ ಲೈನ್ ಸಮಸ್ಯೆಗೆ ಪರಿಹಾರ ನೀಡಲಿದೆ. ಮಳೆಗಾಲದಲ್ಲಿ ಮಾತ್ರ ಈ ತಂಡ ವನ್ನು ರಚಿಸಲು ಅವಕಾಶ ಇಲಾಖೆಯಿಂದ ನೀಡಲಾಗಿದೆ ಎಂದು ತಿಳಿಸಿದರು.

ಪುತ್ತೂರು ಮೆಸ್ಕಾಂ ಉಪವಿಭಾಗದಲ್ಲಿ ಒಟ್ಟು 19 ಶಾಖೆಗಳಿದ್ದು, ಪುತ್ತೂರು ಕೇಂದ್ರ ಕಚೇರಿ ಸೇರಿದಂತೆ ಈ ಎಲ್ಲಾ ಶಾಖೆಗಳಲ್ಲೂ ರಾತ್ರಿ ಪಾಳಯದಲ್ಲಿ ಕೆಲಸ ಮಾಡುವ ಕ್ರಮ ಇಲ್ಲ. ರಾತ್ರಿ ಪಾಳಯದಲ್ಲಿ ಸೇವೆ ಒದಗಿಸುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಂಡರೆ, ಇದಕ್ಕಾಗಿ ಸಿಬ್ಬಂದಿಗಳನ್ನು ನೇಮಕ ಮಾಡಿದರೆ ಇನ್ನಷ್ಟು ಸಮರ್ಥವಾಗಿ ವಿದ್ಯುತ್ ನೀಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News