ಸಿರಿಯ: 4 ತಿಂಗಳಲ್ಲಿ 9.20 ಲಕ್ಷ ಜನ ನಿರ್ವಸಿತ

Update: 2018-06-12 17:15 GMT

ಜಿನೇವ, ಜೂ. 12: 2018ರ ಮೊದಲ ನಾಲ್ಕು ತಿಂಗಳ ಅವಧಿಯಲ್ಲಿ ಸಿರಿಯದ ಒಳಗಡೆ 9.20 ಲಕ್ಷಕ್ಕೂ ಅಧಿಕ ಜನರು ನಿರ್ವಸಿತರಾಗಿದ್ದಾರೆ ಹಾಗೂ ಇದು ಏಳು ವರ್ಷಗಳ ಆಂತರಿಕ ಯುದ್ಧದ ಅವಧಿಯ ಗರಿಷ್ಠ ಸಂಖ್ಯೆಯಾಗಿದೆ ಎಂದು ವಿಶ್ವಸಂಸ್ಥೆ ಸೋಮವಾರ ಹೇಳಿದೆ.

‘‘ಸಿರಿಯದ ಒಳಗೆ ಬೃಹತ್ ಪ್ರಮಾಣದಲ್ಲಿ ಜನರು ನಿರ್ವಸಿತರಾಗುವುದನ್ನು ನಾವು ನೋಡುತ್ತಿದ್ದೇವೆ. ಜನವರಿಯಿಂದ ಎಪ್ರಿಲ್‌ವರೆಗಿನ ಅವಧಿಯಲ್ಲಿ 9.20 ಲಕ್ಷಕ್ಕೂ ಅಧಿಕ ಜನರು ಹೊಸದಾಗಿ ನಿರ್ವಸಿತರಾಗಿದ್ದಾರೆ’’ ಎಂದು ಸಿರಿಯದಲ್ಲಿ ವಿಶ್ವಸಂಸ್ಥೆಯ ಪ್ರಾದೇಶಿಕ ಮಾನವೀಯ ಸಮನ್ವಯಕಾರ ಪನೊಸ್ ವೌಮ್‌ಝಿಸ್ ಜಿನೇವದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

 ಇದರೊಂದಿಗೆ ಆಂತರಿಕ ಸಂಘರ್ಷ ಪೀಡಿತ ಸಿರಿಯದಲ್ಲಿ ಆಂತರಿಕವಾಗಿ ನಿರ್ವಸಿತರಾದವರ ಒಟ್ಟು ಸಂಖ್ಯೆ 62 ಲಕ್ಷಕ್ಕೆ ಏರಿದೆ ಎಂದು ವಿಶ್ವಸಂಸ್ಥೆಯ ಅಂಕಿಅಂಶಗಳು ತಿಳಿಸಿವೆ. ಅದೇ ವೇಳೆ, ಸುಮಾರು 56 ಲಕ್ಷ ಸಿರಿಯ ನಿರಾಶ್ರಿತರು ನೆರೆಯ ದೇಶಗಳಲ್ಲಿ ಇದ್ದಾರೆ.

ಹೊಸದಾಗಿ ನಿರ್ವಸಿತರಾದ ಹೆಚ್ಚಿನವರು ಬಂಡುಕೋರರ ಮಾಜಿ ಭದ್ರಕೋಟೆ ಪೂರ್ವ ಘೌತ ಮತ್ತು ಇದ್ಲಿಬ್ ಪ್ರಾಂತದಲ್ಲಿ ಬಂಡುಕೋರರು ಮತ್ತು ಸಿರಿಯ ಸೈನಿಕರ ನಡುವೆ ಭೀಕರ ಕಾಳಗ ನಡೆಯುತ್ತಿದ್ದಾಗ ನಿರ್ವಸಿತರಾದವರು. ಇದ್ಲಿಬ್ ಈಗಲೂ ಬಂಡುಕೋರರ ನಿಯಂತ್ರಣದಲ್ಲೇ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News