ದನವೊಂದಕ್ಕೆ ಮರಣದಂಡನೆ ಶಿಕ್ಷೆ ವಿಧಿಸಿದ ಬಲ್ಗೇರಿಯಾ!

Update: 2018-06-13 10:11 GMT

ಸೋಫಿಯಾ, ಜೂ.13: ಯುರೋಪಿಯನ್ ಯೂನಿಯನ್ ಗಡಿಗಳನ್ನು ದಾಟಿದ ತಪ್ಪಿಗೆ ಬಲ್ಗೇರಿಯಾದಲ್ಲಿ ದನವೊಂದಕ್ಕೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಆದರೆ ತೀವ್ರ ವಿರೋಧ ವ್ಯಕ್ತವಾದ ನಂತರ ಮರಣದಂಡನೆಯನ್ನು ಹಿಂಪಡೆಯಲಾಗಿದೆ.

ಬಲ್ಗೇರಿಯಾದ ಮಝರಚೆವೊ ಗ್ರಾಮದಲ್ಲಿನ ದನಗಳ ಹಿಂಡೊಂದರಿಂದ ಕಳೆದ ತಿಂಗಳು ಪ್ರತ್ಯೇಕಗೊಂಡಿದ್ದ 'ಪೆಂಕಾ' ನೆರೆಯ ಸರ್ಬಿಯಾ ಪ್ರವೇಶಿಸಿತ್ತು. ಎರಡು ವಾರಗಳ ನಂತರ ಮತ್ತೆ ಬಲ್ಗೇರಿಯಾಗೆ ದನ ಹಿಂದಿರುಗಿದ್ದು, ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪ ಅದರ ಮೇಲಿತ್ತು. ನಿಯಮಗಳಂತೆ ಯುರೋಪಿಯನ್ ಯೂನಿಯನ್ ಪ್ರದೇಶವನ್ನು ಪ್ರಾಣಿಗಳು ಪ್ರವೇಶಿಸಬೇಕಾದರೆ ಮಾಲಕರು ಪ್ರಾಣಿಗಳ ಆರೋಗ್ಯ ಪ್ರಮಾಣೀಕರಿಸುವ ದಾಖಲೆಗಳನ್ನು ಸಲ್ಲಿಸಬೇಕಿದೆ.

ಪೆಂಕಾ ಮರಣದಂಡನೆ ವಿವಾದದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಜನರು, ಶಿಕ್ಷೆಯನ್ನು ವಿರೋಧಿಸಿದ್ದರಲ್ಲದೆ ಕೆಲವರು ದನವನ್ನು 'ಬ್ರಸ್ಸೆಲ್ಸ್ ಆಡಳಿತಶಾಹಿಯ ಸಂತ್ರಸ್ತೆ'ಯೆಂದು ಬಿಂಬಿಸಿದ್ದರು.

ಐದು ವರ್ಷಗಳ ಈ ದನವನ್ನು ರಕ್ಷಿಸಬೇಕು ಎಂದು ಹಲವಾರು ಪ್ರಾಣಿ ಹಕ್ಕು ಕಾರ್ಯಕರ್ತರು ಕೂಡ ಆಗ್ರಹಿಸಿದ್ದರು. ಕೊನೆಗೆ ಒತ್ತಡಕ್ಕೆ ಮಣಿದು ಬಲ್ಗೇರಿಯನ್ ಫುಡ್ ಸೇಫ್ಟಿ ಏಜನ್ಸಿ ಪ್ರಕರಣದ ಪುನರ್ ಪರಿಶೀಲನೆಗೆ ಒಪ್ಪಿತ್ತು. ಇದರಿಂದಾಗಿ ಪೆಂಕಾ ತನ್ನ ಗ್ರಾಮವಾದ ಮಝರಚೆವೊದಲ್ಲಿರುವ ತನ್ನ ಮಾಲಕನ ಮನೆಗೆ ಈ ವಾರಾಂತ್ಯದೊಳಗೆ ಹೋಗಬಹುದಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News