ಅಂಗಡಿಯಿಂದ ಹೊರಗೆಳೆದು ಖ್ಯಾತ ಲೇಖಕನ ಗುಂಡಿಕ್ಕಿ ಹತ್ಯೆ

Update: 2018-06-13 10:50 GMT

ಢಾಕಾ, ಜೂ.13: ಬಾಂಗ್ಲಾದೇಶದ ಖ್ಯಾತ ಲೇಖಕ, ಪ್ರಕಾಶಕ ಶಾಹ್ ಝಹಾನ್ ಬಚ್ಚು ಅವರನ್ನು ಐವರು ಅಪರಿಚಿತ ದುಷ್ಕರ್ಮಿಗಳು ಔಷಧಿ ಅಂಗಡಿಯಿಂದ ಹೊರಗೆಳೆದು ಗುಂಡಿಕ್ಕಿ ಹತ್ಯೆಗೈದ ಘಟನೆ ಮುನ್ಶಿಗಂಜ್ ಜಿಲ್ಲೆಯ ಕಕಲ್ಡಿ ಎಂಬಲ್ಲಿ ಬುಧವಾರ ವರದಿಯಾಗಿದೆ. 

ಜಾತ್ಯತೀತ ಬ್ಲಾಗರುಗಳು, ಕಾರ್ಯಕರ್ತರ ಮೇಲಿನ ಸರಣಿ ದಾಳಿಗಳಿಂದ ಕೆಲ ಸಮಯದ ಹಿಂದೆ ಬಾಂಗ್ಲಾದೇಶ ಕಂಗೆಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

60 ವರ್ಷದ ಶಾಹ್ ಝಹಾನ್ ಜಾತ್ಯತೀತ ತತ್ವಗಳ ಮೇಲೆ ಅಚಲ ನಂಬಿಕೆಯಿರಿಸಿದವರಾಗಿದ್ದರಲ್ಲದೆ ತಮ್ಮದೇ ಪ್ರಕಾಶನ ಸಂಸ್ಥೆ ‘ಬಿಶಾಕ ಪ್ರೊಕಶೊನಿ’ ಹೊಂದಿದ್ದರು. ಈ ಸಂಸ್ಥೆ ಕವನಗಳನ್ನು ಪ್ರಕಟಿಸುತ್ತಿತ್ತು.

ಬಚ್ಚು ಅವರು ಮಂಗಳವಾರ ಸಂಜೆ ಇಫ್ತಾರ್ ಗಿಂತ ಮೊದಲು ಮನೆ ಸಮೀಪದ ಔಷಧಿ ಅಂಗಡಿಯುಲ್ಲಿ ಗೆಳೆಯರನ್ನು ಭೇಟಿಯಾಗಲು ಹೋಗಿದ್ದ ಸಂದರ್ಭ ಎರಡು ಮೋಟಾರ್ ಸೈಕಲ್ ಗಳಲ್ಲಿ ಬಂದ ದುಷ್ಕರ್ಮಿಗಳು ಮೊದಲು ಅಂಗಡಿಯ ಎದುರು ಕಚ್ಛಾ ಬಾಂಬ್ ಸ್ಫೋಟಿಸಿ ಜನರನ್ನು ಚದುರಿಸಿ ನಂತರ ಅಂಗಡಿಯೊಳಗಿದ್ದ ಲೇಖಕರನ್ನು ಹೊರಗೆಳೆದು ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಈ ಹತ್ಯೆಯ ಜವಾಬ್ದಾರಿಯನ್ನು ಯಾವುದೇ ಗುಂಪು ಇಲ್ಲಿಯವರೆಗೆ ಹೊತ್ತುಕೊಂಡಿಲ್ಲ.

ಬಚ್ಚು ಅವರ ನೇರ ನಡೆ ನುಡಿಯನ್ನು ಸಹಿಸಿದ ಉಗ್ರ ಸಂಘಟನೆಗಳು ಈ ಹಿಂದೆಯೂ ಅವರಿಗೆ ಬೆದರಿಕೆಯೊಡ್ಡಿದ್ದವು. ಬಾಂಗ್ಲಾದೇಶ ಕಮ್ಯುನಿಸ್ಟ್ ಪಕ್ಷದ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದರು ಬಚ್ಚು.

ಫೆಬ್ರವರಿ 26, 2015ರಂದು ಬಾಂಗ್ಲಾದ ನಾಸ್ತಿಕವಾದಿ ಲೇಖಕ ಹಾಗೂ ಬ್ಲಾಗರ್ ಅವಿಜಿತ್ ರಾಯ್ ಹತ್ಯೆ ನಂತರ ಆತನ ಪ್ರಕಾಶಕ ಫೈಸಲ್ ಅರೆಫಿನ್ ದಿಪನ್ ಹತ್ಯೆ ಅದೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News