ಬಂಟ್ವಾಳ: ಅಂಗಡಿಗಳಿಗೆ ದಾಳಿ-ನಿಷೇಧಿತ ಪ್ಲಾಸ್ಟಿಕ್ ವಶ

Update: 2018-06-13 11:48 GMT

ಬಂಟ್ವಾಳ, ಜೂ. 13: ನಗರದಲ್ಲಿ ಪ್ಲಾಸ್ಟಿಕ್ ಬಳಕೆಯ ನಿಷೇಧವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಬಂಟ್ವಾಳ ಪುರಸಭೆಯು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಬುಧವಾರ ಇಲ್ಲಿನ ಅಧಿಕಾರಿಗಳ ತಂಡ ಪುರಸಭಾ ವ್ಯಾಪ್ತಿಯ ಅಂಗಡಿ, ಮಳಿಗೆಗಳಿಗೆ ದಾಳಿ ನಡೆಸಿ, ನಿಷೇಧಿತ ಪ್ಲಾಸ್ಟಿಕ್‌ಅನ್ನು ವಶಕ್ಕೆ ಪಡೆದು ಅಂಗಡಿ ಮಾಲಕರಿಂದ ದಂಡ ವಸೂಲಾತಿ ಮಾಡಿತು.

ದಾಳಿಯಲ್ಲಿ ಸುಮಾರು 40 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ಅನ್ನು ವಶಪಡಿಸಲಾಗಿದ್ದು, ನಾಲ್ಕು ಸಾವಿರ ರೂ. ದಂಡ ವಿಧಿಸಿ, ಸೂಚನೆ ಪಾಲಿಸುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕರ್ನಾಟಕ ಸರಕಾರದ ಆದೇಶದಂತೆ, ಪ್ಲಾಸ್ಟಿಕ್ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಉದ್ಯಮದಾರರಿಗೆ ಮತ್ತು ಸಾರ್ವಜನಿಕರಿಗೆ ಸಾಕಷ್ಟು ಅರಿವು ಮೂಡಿಸುವ ನಿಟ್ಟಿನಲ್ಲಿ ಇಂತಹ ದಾಳಿಯನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿ ಮತ್ತಡಿ ಅವರು ತಿಳಿಸಿದ್ದಾರೆ.

ಈ ಸಂಬಂಧ ಪುರಸಭೆಯ ಮುಖ್ಯಾಧಿಕಾರಿಯವರಾದ ರೇಖಾ ಜೆ ಶೆಟ್ಟಿ, ಸಮುದಾಯ ವ್ಯವಹಾರಗಳ ಅಧಿಕಾರಿ ಮತ್ತಡಿ, ಹಿರಿಯ ಆರೋಗ್ಯ ನಿರೀಕ್ಷಕ ರತ್ನಪ್ರಸಾದ್.ಪಿ, ಸಿಬ್ಬಂದಿಗಳು ಶ್ರೀನಿವಾಸ್ ಹಾಗೂ ಇಕ್ಬಾಲ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News