ಧರ್ಮ ವ್ಯಕ್ತಿಯನ್ನು ದ್ವೇಷಿಸುವುದಿಲ್ಲ: ಅಬ್ದುಲ್ ಅಝೀಝ್ ದಾರಿಮಿ
ಮಂಗಳೂರು, ಜೂ.13: ಅರಿವು, ಯೋಜನೆ ಎಲ್ಲಿ ಸೋಲುತ್ತದೆಯೋ ಅಲ್ಲಿ ಧರ್ಮ ಎದ್ದು ನಿಲ್ಲುತ್ತದೆ. ಧರ್ಮ ವ್ಯಕ್ತಿಯನ್ನು ದ್ವೇಷಿಸಲು ಪ್ರೇರೇಪಿಸುವುದಿಲ್ಲ. ಧಾರ್ಮಿಕ ಪ್ರಜ್ಞೆ ಸರಿದಾರಿಗೆ ಕರೆದೊಯ್ಯುತ್ತದೆ ಎಂದು ಭಾಷಣಕಾರ ಅಬ್ದುಲ್ ಅಝೀಝ್ ದಾರಿಮಿ ಪ್ರತಿಪಾದಿಸಿದ್ದಾರೆ.
ನಗರದ ಫಾದರ್ ಮುಲ್ಲರ್ ಆಸ್ಪತ್ರೆಯ ಕನ್ವೆನ್‌ಶನಲ್ ಹಾಲ್‌ನಲ್ಲಿ ವಿಧಾನ ಪರಿಷತ್ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಐವನ್ ಡಿಸೋಜ ನೇತೃತ್ವದಲ್ಲಿ ಬುಧವಾರ ಏರ್ಪಡಿಸಿದ್ದ ಸೌಹಾರ್ದ ಸಭೆ ಹಾಗೂ ಇಫ್ತಾರ್ ಕೂಟ ಸಮಾರಂಭದಲ್ಲಿ ಅವರು ಮಾತನಾಡಿದರು.
ಧರ್ಮ, ಜಾತಿಗಳ ಹೆಸರಿನಲ್ಲಿ ಮೋಸ ಮಾಡಬಾರದು. ಸಮಾಜಮುಖಿ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ಜೀವನದಲ್ಲಿ ಮಾಡಲು ಸಾಧ್ಯವಾಗುವ ಪುಣ್ಯ ಕಾರ್ಯಗಳನ್ನು ಎಲ್ಲರೂ ಮಾಡಬೇಕು ಎಂದು ಅವರು ಹೇಳಿದರು.
ಮದರ್ ತೆರೆಸಾ ಅದ್ಭುತ ಕ್ರಾಂತಿ ಮಾಡಿದ್ದಾರೆ. ಬಡವರನ್ನು ಸಾಕಿ, ಸೇವೆ ಮಾಡಿ ಸಲಹಿದ್ದಾರೆ. ತೆರೆಸಾ ಹಿಂದೂ ಮನೆಯ ಊಟವನ್ನು ಮುಸ್ಲಿಂ ಮನೆಯ ಹಸಿವನ್ನು ನೀಗಿಸಿದ್ದಾರೆ. ನಮ್ಮದು ಸೌಹಾರ್ದ ಭಾರತ ಎಂದು ದಾರಿಮಿ ಬಣ್ಣಿಸಿದರು. ಮಾನವೀಯತೆಯನ್ನು ಉಳಿಸುವ ತಾಕತ್ತು ಐವನ್ ಡಿಸೋಜ ಅವರಿಗೆ ಇದೆ. ಅದು ಇಂದಿನ ಅಗತ್ಯವೂ ಹೌದು. ವೈಭೋಗದಿಂದ ಯಾವುದೇ ಪ್ರಯೋಜನವಿಲ್ಲ. ಮಾನವೀಯತೆ ಪ್ರಮುಖವಾಗುತ್ತದೆ ಎಂದು ಅವರು ತಿಳಿಸಿದರು.
ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಮಾತನಾಡಿ, ಇಫ್ತಾರ್ ಕೂಟ ಆಯೋಜನೆ ಹೃದಯವಂತರ ಬಾಂಧವ್ಯದ ಧ್ಯೋತಕವಾಗಿದೆ. ಇಂತಹ ಕೂಟಗಳು ದ.ಕ.ದಲ್ಲಿ ಸೌಹಾರ್ದಯುತಕ್ಕೆ ಮುನ್ನುಡಿಯಾಗಲಿ ಎಂದು ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಐವನ್ ಡಿಸೋಜ, ಕಾಂಗ್ರೆಸ್ ಮುಖಂಡ ಇಬ್ರಾಹೀಂ ಕೊಡಿಜಾಲ್, ಮೇಯರ್ ಭಾಸ್ಕರ್ ಮೋಯ್ಲಿ, ಸಚೇತಕ ಶಶಿಧರ್ ಹೆಗಡೆ, ಸಬಿತಾ ಮೊನಿಸ್, ಆಶಾ ಡಿಸಿಲ್ವಾ, ಹಿಳ್ಡಾ ಆಳ್ವ, ರೋಜಿ ಮತಾಯಸ್ ಮತ್ತಿತರರು ಉಪಸ್ಥಿತರಿದ್ದರು.
‘ರಮಝಾನ್ ತ್ಯಾಗದ ಸಂಕೇತ’
ಭಾರತವು ಬಹುಸಂಸ್ಕೃತಿಯ ರಾಷ್ಟ್ರವಾಗಿದೆ. ಎಲ್ಲ ಜಾತಿಯ, ಎಲ್ಲ ಭಾಷೆಗಳ ಜನರು ಇಲ್ಲಿದ್ದಾರೆ. ಸಾಮಾಜಿಕ ಸಾಮರಸ್ಯ ಬಲಗೊಳಿಸುವ ಇಂತಹ ಕೂಟ ಆಯೋಜಿಸುತ್ತಿದೆ. ಮುಂದಿನ ಭಾರತ ಸೌಹಾರ್ದ, ಸುಂದರ, ಭಾವೈಕ್ಯತೆಯ, ಬಲಿಷ್ಠ ರಾಷ್ಟ್ರವಾಗಲಿ ಎಂದು ಮಾಜಿ ಸಚಿವ ರಮಾನಾಥ ರೈ ಆಶಿಸಿದರು.