ಹಣದುಬ್ಬರ ಏರಿಕೆ: ಆಗಸ್ಟ್‌ನಲ್ಲಿ ಸಾಲದರ ಮತ್ತಷ್ಟು ಹೆಚ್ಚುವ ಸಾಧ್ಯತೆ

Update: 2018-06-13 15:18 GMT

ಹೊಸದಿಲ್ಲಿ,ಜೂ.13: ಮೇ ತಿಂಗಳಲ್ಲಿ ಹಣದುಬ್ಬರವು ಶೇ.4.87ಕ್ಕೆ ಜಿಗಿದಿರುವ ಹಿನ್ನಲೆಯಲ್ಲಿ ಆರ್‌ಬಿಐ ಮುಂಬರುವ ಆಗಸ್ಟ್‌ನಲ್ಲಿ ತನ್ನ ಹಣಕಾಸು ನೀತಿ ಪರಾಮರ್ಶೆಯಲ್ಲಿ ಸಾಲದ ಮೇಲಿನ ಬಡ್ಡಿದರಗಳನ್ನು ಮತ್ತೊಮ್ಮೆ ಹೆಚ್ಚಿಸಬಹುದು ಎಂದು ವಿಶ್ಲೇಷಕರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷದ ಮೇ ತಿಂಗಳಲ್ಲಿ ಹಣದುಬ್ಬರವು ಶೇ.2.18ರಷ್ಟಿತ್ತು.

 ಹಣದುಬ್ಬರವು ಮುಂಬರುವ ತಿಂಗಳುಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳೇ ಕಂಡು ಬರುತ್ತಿದ್ದು,ಆರ್‌ಬಿಐ ತನ್ನ ಆಗಸ್ಟ್ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿದರಗಳನ್ನು ಮತ್ತೆ ಶೇ.0.25ರಷ್ಟು ಹೆಚ್ಚಿಸಲಿದೆ ಎಂದು ನಾವು ನಿರೀಕ್ಷಿಸಿದ್ದೇವೆ ಎಂದು ಫ್ರೆಂಚ್ ಬ್ರೋಕರೇಜ್ ಸಂಸ್ಥೆ ಬಿಎನ್‌ಬಿ ಪರಿಬಾಸ್ ಹೇಳಿದರೆ,ಜಾಗತಿಕ ಕಚ್ಚಾತೈಲ ಬೆಲೆಗಳು ಈಗಿನ ಮಟ್ಟದಲ್ಲಿಯೇ ಮುಂದುವರಿದರೆ ಮತ್ತು ಆಹಾರ ಸಾಮಗ್ರಿಗಳು ಹಾಗೂ ಇಂಧನಗಳನ್ನು ಹೊರತುಪಡಿಸಿದ ‘ಕೋರ್’ ಹಣದುಬ್ಬರ ಏರುಹಾದಿಯಲ್ಲಿಯೇ ಸಾಗಿದರೆ ಆಗಸ್ಟ್‌ನಲ್ಲಿ ಮತ್ತೆ ಬಡ್ಡಿದರ ಏರಿಕೆಯನ್ನು ಪ್ರಕಟಿಸಬಹುದು ಎಂದು ಯುಬಿಎಸ್ ಸೆಕ್ಯೂರಿಟಿಸ್ ತಿಳಿಸಿದೆ. ಜರ್ಮನ್ ಬ್ರೋಕರೇಜ್ ಡೊಯ್‌ಚೆ ಬ್ಯಾಂಕ್ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಆರ್‌ಬಿಐ ಕಳೆದ ತಿಂಗಳು ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ರೆಪೊ ದರವನ್ನು ಶೇ.0.25ರಷ್ಟು ಹೆಚ್ಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News