ಮಕ್ಕಳ ಅಪಹರಣಕಾರರೆಂಬ ಶಂಕೆಯಲ್ಲಿ ಹತ್ಯೆ: ಪ್ರಮುಖ ಆರೋಪಿಯ ಬಂಧನ
ಗುವಹಾಟಿ, ಜೂ.13: ಅಸ್ಸಾಂನಲ್ಲಿ ಗುಂಪೊಂದು ಇಬ್ಬರನ್ನು ಹತ್ಯೆ ಮಾಡಲಾದ ಪ್ರಕರಣದ ಪ್ರಮುಖ ಆರೋಪಿಯನ್ನು ಬುಧವಾರದಂದು ಕರ್ಬಿ ಆ್ಯಂಗ್ಲಾಂಗ್ ಜಿಲ್ಲೆಯಿಂದ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಂಧನದಿಂದ ಕರ್ಬಿ ಆ್ಯಂಗ್ಲಾಂಗ್ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಸಾಮೂಹಿಕವಾಗಿ ಹತ್ಯೆಗೈದ ಮತ್ತು ದ್ವೇಷ ಸಂದೇಶಗಳನ್ನು ಹರಡಿದ ಹಾಗೂ ವದಂತಿಗಳನ್ನು ಹಬ್ಬಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳ ಸಂಖ್ಯೆ 64ಕ್ಕೆ ತಲುಪಿದೆ.
ಜೋಝ್ ತಿಮುಂಗ್ ಅಲಿಯಾಸ್ ಅಲ್ಫಾ ಎಂಬ ವ್ಯಕ್ತಿಯನ್ನು ಪೊಲೀಸರು ಹತ್ಯಾ ಘಟನೆ ನಡೆದ ದೊಕ್ಮೊಕ ಪೊಲೀಸ್ ಠಾಣಾ ವ್ಯಾಪ್ತಿಯ ಬೆಲುರ್‌ಘಾಟ್ ಪ್ರದೇಶದಿಂದ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪೊಲೀಸರ ಪ್ರಕಾರ, ತಿಮುಂಗ್ ಗ್ರಾಮಸ್ಥರಿಗೆ ಮೊಬೈಲ್ ಮೂಲಕ ಕರೆ ಮಾಡಿ ನೀಲೊತ್ಪಲ್ ದಾಸ್ ಮತ್ತು ಅಭಿಜಿತ್‌ನಾಥ್ ಎಂಬಿಬ್ಬರು ವಾಹನದಲ್ಲಿ ಸಾಗುತ್ತಿದ್ದು ಅವರು ಮಕ್ಕಳ ಕಳ್ಳರಾಗಿದ್ದಾರೆ. ಹಾಗಾಗಿ ಅವರನ್ನು ಕೂಡಲೇ ತಡೆಯುವಂತೆ ಸೂಚಿಸಿದ್ದ.
ಕರ್ಬಿ ಆ್ಯಂಗ್ಲಾಂಗ್ ಸ್ವಾಯತ್ತ ಮಂಡಳಿಯು ಮೃತ ಯುವಕರ ಕುಟುಂಬಕ್ಕೆ ತಲಾ ಐದು ಲಕ್ಷ ರೂ. ಪರಿಹಾರ ನೀಡಲು ನಿರ್ಧರಿಸಿದೆ. ಜೊತೆಗೆ ಘಟನೆ ನಡೆದ ಸ್ಥಳದಲ್ಲಿ ಇವರಿಬ್ಬರ ಪ್ರತಿಮೆಗಳನ್ನು ಸ್ಥಾಪಿಸಲು ಯೋಜಿಸಿದೆ.