ಶಾಲಾ ಗೋಡೆಗಳಲ್ಲಿ ಮಧುಬನಿ, ವಾರ್ಲಿ, ಬುಡಕಟ್ಟು ಕಲೆಗಳ ಚಿತ್ತಾರ !
ಉಡುಪಿ, ಜೂ.13: ಶೈಕ್ಷಣಿಕವಾಗಿ ಹಾಗೂ ಪಠ್ಯೇತರ ಚಟುವಟಿಕೆಗಳ ವಿಷಯದಲ್ಲಿ ಜಿಲ್ಲೆಯಲ್ಲಿ ಮುಂಚೂಣಿಯ ಸರಕಾರಿ ಶಾಲೆಗಳಲ್ಲಿ ಒಂದಾಗಿರುವ ಉಡುಪಿ ವಳಕಾಡಿನ ಸರಕಾರಿ ಸಂಯುಕ್ತ ಪ್ರೌಢ ಶಾಲೆಯ ಗೋಡೆಗಳು ಈಗ ವೈವಿಧ್ಯಮಯ ಸಾಂಪ್ರದಾಯಿಕ ಚಿತ್ರಕಲೆಗಳೊಂದಿಗೆ ರಾರಾಜಿಸುತ್ತಿವೆ.
ಖ್ಯಾತ ಚಿತ್ರಕಲಾವಿದರೂ, ಶಾಲೆಯ ಅಧ್ಯಾಪಕರೂ ಆಗಿರುವ ಉಪಾಧ್ಯಾಯ ಮೂಡುಬೆಳ್ಳೆ ಅವರ ಮಾರ್ಗದರ್ಶನದಲ್ಲಿ ವಳಕಾಡು ಶಾಲೆಯ ವಿದ್ಯಾರ್ಥಿಗಳು ಇದೀಗ ಶಾಲೆಯ ಎದುರಿನ ಗೋಡೆಗಳನ್ನು ಮಧುಬನಿ, ವಾರ್ಲಿ, ಬುಡಕಟ್ಟು ಜನಾಂಗದ ಕಾವಿಚಿತ್ರಕಲೆಯ ಚಿತ್ತಾರಗಳನ್ನು ಬಿಡಿಸುವ ಮೂಲಕ ಶಾಲೆಯ ಅಂದವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.
ಇದೀಗ ವಿದ್ಯಾರ್ಥಿಗಳು ಬಿಡಿಸಿರುವ ಈ ಚಿತ್ರಕಲೆಯನ್ನು ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿರುವ ಉಡುಪಿಯ ಕಲಾವಿದ ರಾಘವೇಂದ್ರ ಅಮೀನ್ ಅವರು ಜೂ.14ರ ಗುರುವಾರ ಬೆಳಗ್ಗೆ 10:15ಕ್ಕೆ ಉದ್ಘಾಟಿಸಲಿದ್ದಾರೆ.
ಬಳಿಕ ಶಾಲೆಯ ನಲಂದಾ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಲೆಯ ವಿವಿಧ ವಿದ್ಯಾರ್ಥಿ ಸಂಘಗಳ (ಚಿತ್ರಕಲಾಸಂಘ, ಇಕೋಕ್ಲಬ್, ಕ್ವಿಜ್‌ಕ್ಲಬ್, ವಿಜ್ಞಾನ ಸಂಘ, ಕನ್ನಡ ಸಾಹಿತ್ಯ ಸಂಘ, ಸಂಸ್ಕೃತ ಸಂಘ, ಹಿಂದಿ ಭಾಷಾ ಸಂಘ, ಇಂಗ್ಲಿಷ್ ಭಾಷಾ ಸಂಘ, ಕಾನೂನು ಸಾಕ್ಷರತಾ ಸಂಘ, ಮತದಾನ ಸಾಕ್ಷರತಾ ಸಂಘ, ಇಂಟರಾಕ್ಟ್ ಕ್ಲಬ್ ಇತ್ಯಾದಿ) ಉದ್ಘಾಟನೆಯನ್ನು ಖ್ಯಾತ ಉದ್ಯಮಿ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಉಪಾಧ್ಯ ನೆರವೇರಿಸಲಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ನಿರ್ಮಲಾ ಬಿ. ತಿಳಿಸಿದ್ದಾರೆ.