ಉಡುಪಿ: ಜಿಪಂ, 3ಗ್ರಾಪಂ ಸ್ಥಾನಕ್ಕೆ ಇಂದು ಉಪ ಚುನಾವಣೆ
ಉಡುಪಿ, ಜೂ.13: ಕುಂದಾಪುರ ತಾಲೂಕಿನ ಸಿದ್ದಾಪುರ ಜಿಪಂ ಸ್ಥಾನ ಹಾಗೂ ಜಿಲ್ಲೆಯ ಮೂರು ಗ್ರಾಪಂ ಸ್ಥಾನಗಳಿಗೆ ನಾಳೆ ಉಪಚುನಾವಣೆ ನಡೆಯಲಿದೆ. ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಪಂನ ಒಂದು ಸ್ಥಾನ, ಕಾರ್ಕಳ ತಾಲೂಕು ಸಾಣೂರು ಗ್ರಾಪಂನ ಒಂದು ಸ್ಥಾನ ಹಾಗೂ ಉಡುಪಿ ತಾಲೂಕು ಕುದಿ ಗ್ರಾಪಂನ ಒಂದು ಸ್ಥಾನಗಳಿಗೆ ನಾಳೆ ಮತದಾನ ನಡೆಯಲಿದೆ.
ಈ ಸಂಬಂಧ ಚುನಾವಣಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಅರ್ಹ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರಕಾರಿ ಕಚೇರಿಗಳ, ಸಾರ್ವಜನಿಕ ಉದ್ದಿಮೆಗಳ, ಖಾಸಗಿ ಕಂಪನಿಗಳ, ಶಾಲಾ ಕಾಲೇಜುಗಳ (ಅನುದಾನಿತ, ಅನುದಾನ ರಹಿತ ಸೇರಿ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು), ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕ್‌ಗಳ, ಕೇಂದ್ರ ಮತ್ತು ರಾಜ್ಯ ಸರಕಾರದ ಕಾರ್ಖಾನೆಗಳ, ಉಳಿದ ಕೈಗಾರಿಕಾ ಸಂಸ್ಥೆಗಳ ಹಾಗೂ ಸಹಕಾರಿ ರಂಗದ ಸಂಘ ಸಂಸ್ಥೆಗಳ ಅರ್ಹ ಮತದಾರ ನೌಕರರಿಗೆ ಹಾಗೂ ಎಲ್ಲಾ ವ್ಯವಹಾರಿಕ ಸಂಸ್ಥೆಗಳ, ಔದ್ಯಮಿಕ ಸಂಸ್ಥೆಗಳ ಮತ್ತು ಇನ್ನಿತರ ಸಾರ್ವಜನಿಕ ಸಂಸ್ಥೆಗಳಲ್ಲಿ ಖಾಯಂ ಮತ್ತು ದಿನಗೂಲಿ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಅರ್ಹ ಮತದಾರ ನೌಕರರಿಗೆ ಸೀಮಿತವಾದಂತೆ ಜೂ.14ರಂದು ವೇತನ ಸಹಿತ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.