×
Ad

ಅಪಘಾತ ಪ್ರಕರಣ: ಆರೋಪಿಗೆ ಶಿಕ್ಷೆ

Update: 2018-06-13 21:24 IST

ಉಡುಪಿ, ಜೂ.13: ಮೂರು ವರ್ಷಗಳ ಹಿಂದೆ ಅತೀ ವೇಗದ ಹಾಗೂ ನಿರ್ಲಕ್ಷದಿಂದ ಮೋಟಾರು ಸೈಕಲ್‌ನ್ನು ಚಲಾಯಿಸಿಕೊಂಡು ಬಂದು, ಇನ್ನೊಂದು ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದು ಅದರ ಸವಾರನ ಸಾವಿಗೆ ಕಾರಣನಾದ ವ್ಯಕ್ತಿಗೆ ಉಡುಪಿಯ ಎರಡನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ ಆರು ತಿಂಗಳ ಶಿಕ್ಷೆ ಹಾಗೂ 10,000ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ.

ಬಡಾ ಎರ್ಮಾಳ್‌ನ ಲೀಲಾ ನಿವಾಸದ ರಾಜೇಶ್ ಕೋಟ್ಯಾನ್ ಅವರು 2015ರ ನವೆಂಬರ್ 1ರಂದು ಅಪರಾಹ್ನ ಮೂರು ಗಂಟೆ ಸುಮಾರಿಗೆ ಎರ್ಮಾಳ್ ಗ್ರಾಮದ ಜನಾರ್ದನ ದೇವಸ್ಥಾನದ ಬಳಿ ತನ್ನ ಮೋಟಾರು ಸೈಕಲ್‌ನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಎದುರಿನಿಂದ ಬರುತಿದ್ದ ರಾಜನ್ ಆಚಾರಿ ಎಂಬವರ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡ ರಾಜನ್ ಆಚಾರಿ ಆಸ್ಪತ್ರೆಗೆ ಸಾಗಿುವ ದಾರಿಯಲ್ಲಿ ಮೃತಪಟ್ಟಿದ್ದರು.

ಈ ಬಗ್ಗೆ ಕಾಪು ವೃತ್ತನಿರೀಕ್ಷಕರಾಗಿದ್ದ ಸುನೀಲ್ ವೈ.ನಾಯ್ಕ ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಈ ಪ್ರಕರಣ ನಗರದ 2ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿ ವಿರುದ್ಧದ ಪ್ರಕರಣ ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶರಾದ ಶೋಭಾ ಇ. ಅವರು, ಆರೋಪಿಗಳಿಗೆ 6 ತಿಂಗಳು ಶಿಕ್ಷೆ ಹಾಗೂ ಒಟ್ಟು 10,000 ರೂ. ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.

ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ಜಯಂತಿ ಕೆ. ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News