×
Ad

ಉಡುಪಿ: ಪ್ರತಾಪ್‌ಚಂದ್ರ ಶೆಟ್ಟರಿಗೆ ಸಚಿವ ಸ್ಥಾನ ನೀಡಲು ಆಗ್ರಹ

Update: 2018-06-13 22:11 IST

ಉಡುಪಿ, ಜೂ.13: ಜಿಲ್ಲೆಯಲ್ಲಿ ಪಕ್ಷದ ಹಿರಿಯ ನಾಯಕರಾಗಿದ್ದು, ಪಕ್ಷ ನಿಷ್ಠೆ ಹಾಗೂ ನಿಷ್ಕಂಳಕ ರಾಜಕಾರಣಕ್ಕೆ ಹೆಸರಾದ ವಿಧಾನಪರಿಷತ್ ಸದಸ್ಯ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಅವರಿಗೆ ಸಚಿವ ಸ್ಥಾನ ಹಾಗೂ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ನೀಡುವಂತೆ ಕುಂದಾಪುರದ ಯುವ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾ ಶೆಟ್ಟಿ ಅವರು, ಪ್ರತಾಪ್‌ಚಂದ್ರ ಶೆಟ್ಟಿ ಅವರು ನಾಲ್ಕು ಬಾರಿ ಕುಂದಾಪುರದ ಶಾಸಕರಾಗಿ ಹಾಗೂ ಮೂರು ಅವಧಿಗೆ ವಿಧಾನಪರಿಷತ್ ಸದಸ್ಯರಾಗಿ ಅಪಾರ ಅನುಭವವವನ್ನು ಹೊಂದಿದ್ದಾರೆ ಎಂದರು.

ತನ್ನ ಸುದೀರ್ಘ ಅವಧಿಯ ರಾಜಕಾರಣದಲ್ಲಿ ಯಾವುದೇ ಪದವಿಗಾಗಿ ಲಾಬಿ ನಡೆಸದೇ, ಶಾಸಕರಾಗಿರುವಾಗಲೂ ಯಾವುದೇ ನಿಗಮ, ಮಂಡಳಿ ಅಥವಾ ಲಾಭದಾಯಕ ಹುದ್ದೆಯನ್ನು ಬಯಸಿ ಪಡೆದವರು ಪ್ರತಾಪ್ ಅಲ್ಲ ಎಂದರು.

ಎರಡು ಜಿಲ್ಲೆಗಳಲ್ಲಿ ಪ್ರಬಲ ಸಮುದಾಯದ ಏಕೈಕ ಶಾಸಕರಾಗಿರುವ ಜಾತ್ಯಾತೀತ ನಾಯಕ ಪ್ರತಾಪ್‌ಚಂದ್ರ ಶೆಟ್ಟಿ, ಭ್ರಷ್ಟಾಚಾರ ಸೇರಿದಂತೆ ಯಾವುದೇ ಕಳಂಕ ಹೊಂದಿರದ ನಿಷ್ಕಂಳಕ ರಾಜಕಾರಣಿಯಾಗಿದ್ದಾರೆ. ಇವರಿಗೆ ಸಚಿವ ಪದವಿ ನೀಡುವುದರಿಂದ ಕಳೆಗುಂದಿದ ಉಡುಪಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿ ಪಕ್ಷದ ಸಂಘಟನೆಗೆ ಸ್ಪೂರ್ತಿ ದೊರೆಯಲಿದೆ ಎಂದವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಯುವ ಕಾಂಗ್ರೆಸ್‌ನ ರಮೇಶ್ ಶೆಟ್ಟಿ, ನಟರಾಜ ಹೊಳ್ಳ, ಸಂಪತ್ ಶೆಟ್ಟಿ, ವಿಜಯ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News