ಟೆಸ್ಟ್ ಕ್ರಿಕೆಟ್‌ನಲ್ಲಿ ಅಪೂರ್ವ ದಾಖಲೆ ನಿರ್ಮಿಸಿದ ಧವನ್

Update: 2018-06-14 08:19 GMT

ಬೆಂಗಳೂರು, ಜೂ.14: ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪೂರ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧ ಗುರುವಾರ ಆರಂಭವಾದ ಮೊದಲ ಟೆಸ್ಟ್‌ನ ಭೋಜನ ವಿರಾಮಕ್ಕೆ ಮೊದಲೇ ಶತಕ ಸಿಡಿಸಿದ ಭಾರತದ ಮೊದಲ ದಾಂಡಿಗನೆಂಬ ಕೀರ್ತಿಗೆ ಭಾಜನರಾಗಿ ಹೊಸ ದಾಖಲೆ ಬರೆದಿದ್ದಾರೆ.

ಎಡಗೈ ದಾಂಡಿಗ ಧವನ್ ಕೇವಲ 91 ಎಸೆತಗಳಲ್ಲಿ 19 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ ಟೆಸ್ಟ್‌ನ ಮೊದಲ ಸೆಶನ್‌ನಲ್ಲಿ ಶತಕ ಪೂರೈಸಿದ್ದಾರೆ. ಟೆಸ್ಟ್‌ನ ಮೊದಲ ಸೆಶನ್‌ನಲ್ಲಿ ಶತಕ ಸಿಡಿಸಿದ ವಿಶ್ವದ ಆರನೇ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಹಿಂದೆ ವಿಕ್ಟರ್ ಟ್ರಂಪರ್(1902ರಲ್ಲಿ ಇಂಗ್ಲೆಂಡ್ ವಿರುದ್ಧ), ಚಾರ್ಲಿ ಮಕರ್ಟ್ನಿ(1926ರಲ್ಲಿ ಇಂಗ್ಲೆಂಡ್ ವಿರುದ್ಧ), ಡಾನ್ ಬ್ರಾಡ್ಮನ್(1930ರಲ್ಲಿ ಇಂಗ್ಲೆಂಡ್ ವಿರುದ್ಧ), ಮಜೀದ್ ಖಾನ್(1976ರಲ್ಲಿ ನ್ಯೂಝಿಲೆಂಡ್ ವಿರುದ್ದ), ಡೇವಿಡ್ ವಾರ್ನರ್(2017ರಲ್ಲಿ ಪಾಕಿಸ್ತಾನ ವಿರುದ್ಧ) ಈ ಸಾಧನೆ ಮಾಡಿದ್ದಾರೆ.

ಭಾರತದ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ 2006ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಸೈಂಟ್ ಲೂಸಿಯಾದಲ್ಲಿ 99 ರನ್ ಗಳಿಸಿದ್ದರು. ಇದು ಲಂಚ್ ವಿರಾಮಕ್ಕೆ ಮೊದಲು ಭಾರತದ ದಾಂಡಿಗನ ಉತ್ತಮ ಸಾಧನೆಯಾಗಿತ್ತು.

ಧವನ್ ತನ್ನ 30ನೇ ಟೆಸ್ಟ್ ಪಂದ್ಯದಲ್ಲಿ ಏಳನೇ ಶತಕ ದಾಖಲಿಸಿದರು. ಧವನ್ ಶತಕದ ಬೆಂಬಲದಿಂದ ಭಾರತ ಭೋಜನ ವಿರಾಮದ ವೇಳೆಗೆ ವಿಕೆಟ್ ನಷ್ಟವಿಲ್ಲದೆ 158 ರನ್ ಗಳಿಸಿತು. 32ರ ಹರೆಯದ ಧವನ್‌ಗೆ ಇನ್ನೋರ್ವ ಆರಂಭಿಕ ಆಟಗಾರ ಮುರಳಿ ವಿಜಯ್ ಉತ್ತಮ ಸಾಥ್ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News