ಪುತ್ತೂರಿನ ಡಾ. ಅನ್ನಪೂರ್ಣ ಕಿಣಿಗೆ ಅಮೆರಿಕದ 'ಹಾರ್ಟ್ ಆಫ್ ಗೋಲ್ಡ್ ಅವಾರ್ಡ್'
ಪುತ್ತೂರು, ಜೂ. 14: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ವೈದ್ಯೆಯೊಬ್ಬರು ಅಮೆರಿಕದ ಉನ್ನತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ಕಳೆದ ವರ್ಷ ಅಮೆರಿಕ ನೀಡಿದ ಅತ್ಯುನ್ನತ ಪ್ರಶಸ್ತಿ ಪಡೆದುಕೊಂಡಿದ್ದರು.
ಅಮೆರಿಕದ ನ್ಯೂಯಾರ್ಕ್‌ನಲ್ಲಿ ಎರಡು ದಶಕಗಳಿಂದ ಹೃದ್ರೋಗ ತಜ್ಞೆಯಾಗಿರುವ ಡಾ. ಅನ್ನಪೂರ್ಣ ಎಸ್.ಕಿಣಿ (52) ಅವರಿಗೆ ಅಮೆರಿಕನ್ ಹಾರ್ಟ್ ಎಸೋಸಿಯೇಶನ್ ವತಿಯಿಂದ 'ಹಾರ್ಟ್ ಆಫ್ ಗೋಲ್ಡ್ ಅವಾರ್ಡ್' ನೀಡಿ ಗೌರವಿಸಲಾಗಿದೆ. ನ್ಯೂಯಾರ್ಕ್ ಜನರ ಆರೋಗ್ಯ ವೃದ್ಧಿಗೆ ಗಣನೀಯ ಕೊಡುಗೆ ನೀಡಿರುವುದನ್ನು ಗಮನಿಸಿ ಈ ಪ್ರಶಸ್ತಿ ನೀಡಲಾಗಿದೆ. ಜೂನ್ 6ರಂದು ನ್ಯೂಯಾರ್ಕ್‌ನಲ್ಲಿ ನಡೆದ ಸಮಾರಂಭದಲ್ಲಿ ಮೌಂಟ್ ಸಿನಾಯಿ ಹಾಸ್ಪಿಟಲ್‌ನ ಪ್ರಧಾನ ವೈದ್ಯಕೀಯ ತಜ್ಞರಾದ ವೆಲೆಂಟಿನ್ ಫುಸ್ಟರ್ ಪ್ರಶಸ್ತಿ ಪ್ರದಾನ ಮಾಡಿದರು. ಡಾ.ಅನ್ನಪೂರ್ಣ ಅವರು ಮೌಂಟ್ ಸಿನಾಯಿ ಕಾರ್ಡಿಯಾಕ್ ಕೆಥೆಟರಿಸೇಶನ್ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ.
2017ರ ಮೇ 13ರಂದು ಅವರಿಗೆ ಎಲ್ಲಿಸ್ ಐಲ್ಯಾಂಡ್ ಮೆಡಲ್ ಆಫ್ ಆನರ್ ಎಂಬ ಪ್ರಶಸ್ತಿ ನೀಡಲಾಗಿತ್ತು. ನ್ಯೂಯಾರ್ಕ್‌ನ 350 ಅತ್ಯಂತ ಸುರಕ್ಷಿತ ಹೃದಯ ಆಪರೇಟರ್‌ಗಳ ಪೈಕಿ ಒಬ್ಬರಾಗಿರುವ ಡಾ.ಕಿಣಿ, ಅತ್ಯಂತ ಕಡಿಮೆ ಅಪಾಯದಲ್ಲಿ ಸರ್ಜರಿ ಮಾಡಬಲ್ಲ ಕೆಲವೇ ಕೆಲವು ತಜ್ಞರಲ್ಲಿ ಒಬ್ಬರೆಂದು ಮಾನ್ಯತೆ ಪಡೆದಿದ್ದಾರೆ. ವರ್ಷವೊಂದರಲ್ಲಿ ಒಂದು ಸಾವಿರ ಕೊರೊನರಿ ಇಂಟರ್‌ವೆನ್ಶನ್ ಮಾಡುವ ಅಮೆರಿಕದ ಏಕೈಕ ಮಹಿಳಾ ವೈದ್ಯೆ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.
ಮೂಲತಃ ಪುತ್ತೂರಿನ ಬೊಳುವಾರು ನಿವಾಸಿಯಾಗಿರುವ ಡಾ. ಅನ್ನಪೂರ್ಣ ಎಸ್. ಕಿಣಿ ಅವರು ನಾಮದೇವ ಪ್ರಭು ಮತ್ತು ಪುಷ್ಪಲತಾ ದಂಪತಿಯ ಮೂವರು ಮಕ್ಕಳಲ್ಲಿ 2ನೆಯವರು. ಹಿರಿಯ ಸಹೋದರ ಡಾ.ಕೆ. ಅಶೋಕ್ ಪ್ರಭು ಅವರು ಮಂಗಳೂರಿನಲ್ಲಿ ವೈದ್ಯರಾಗಿದ್ದಾರೆ. ತಮ್ಮ ರಾಧೇಶ್ ವಿ. ಪ್ರಭು ಬೊಳುವಾರು ಮನೆಯಲ್ಲಿದ್ದಾರೆ. ಉಳ್ಳಾಲ ಮೂಲದ ಡಾ.ಯು.ಸುಭಾಷ್ ಕಿಣಿ ಅವರನ್ನು ಮದುವೆಯಾದ ಅನ್ನಪೂರ್ಣ, ಅಕ್ಷಯ್ ಕಿಣಿ ಮತ್ತು ಸಮೀರ್ ಕಿಣಿ ಎಂಬಿಬ್ಬರು ಮಕ್ಕಳ ತಾಯಿ. ಪ್ರಸ್ತುತ ಕುಟುಂಬ ಸಮೇತ ನ್ಯೂಯಾರ್ಕ್‌ನಲ್ಲಿ ನೆಲೆಸಿದ್ದಾರೆ.
ಪುತ್ತೂರು ಸಂತ ವಿಕ್ಟರ್ಸ್ ಬಾಲಿಕಾ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಪಡೆದು, ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ಅನ್ನಪೂರ್ಣ, 1991ರಲ್ಲಿ ಕೆಎಂಸಿಯಲ್ಲಿ ಗೋಲ್ಡ್ ಮೆಡಲ್ ಜತೆ ಎಂಬಿಬಿಎಸ್ ಮುಗಿಸಿ ಲಂಡನ್‌ಗೆ ತೆರಳಿದರು. ಅಲ್ಲಿ ಎಂಆರ್‌ಸಿಪಿ ಪೂರೈಸಿ ನಂತರ ಅಮೆರಿಕಕ್ಕೆ ತೆರಳಿ ನ್ಯೂಯಾರ್ಕ್‌ನ ಮೌಂಟ್ ಸಿನಾಯ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಕಾರ್ಡಿಯಾಲಜಿಸ್ಟ್ ಆಗಿ ಕರ್ತವ್ಯಕ್ಕೆ ಸೇರಿದರು. ಪ್ರಸ್ತುತ ಅಲ್ಲೇ ಕೆಲಸ ಮಾಡುತ್ತಿದ್ದಾರೆ.
ತಿಂಗಳ ಹಿಂದೆ ಪುತ್ತೂರಿಗೆ ಬಂದಿದ್ದರು
ವರ್ಷಕ್ಕೊಮ್ಮೆ ಊರಿಗೆ ಬಂದು ಹೋಗುವ ಅನ್ನಪೂರ್ಣ, ಈ ಬಾರಿ ಏಪ್ರಿಲ್‌ನಲ್ಲಿ ಬಂದಿದ್ದರು ಎಂದು ಅವರ ಸಹೋದರ ರಾಧೇಶ್ ವಿ. ಪ್ರಭು ಪತ್ರಿಕೆಗೆ ತಿಳಿಸಿದ್ದಾರೆ. ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀಗಳು ಡಾ. ಅನ್ನಪೂರ್ಣ ಕಿಣಿಯವರಿಗೆ ವಿದ್ಯಾಧಿರಾಜ ಪ್ರಶಸ್ತಿ ನೀಡಿ ಗೌರವಿಸಲು ಆಹ್ವಾನಿಸಿದ್ದರು. ಅದಕ್ಕೆಂದೇ ಕುಟುಂಬ ಸಮೇತ ಬಂದಿದ್ದವರು ಪುತ್ತೂರಿನಲ್ಲಿ ನಾಲ್ಕು ದಿನ ಉಳಿದುಕೊಂಡಿದ್ದರು. ನಂತರ ಗೋವಾಕ್ಕೆ ತೆರಳಿ ಪ್ರಶಸ್ತಿ ಸ್ವೀಕರಿಸಿ ನ್ಯೂಯಾರ್ಕ್‌ಗೆ ತೆರಳಿದರು ಎಂದವರು ತಿಳಿಸಿದ್ದಾರೆ.