ಮಂಗಳೂರು- ಬೆಂಗಳೂರು ರೈಲು ಸಂಚಾರ ಸ್ಥಗಿತ
ಮಂಗಳೂರು, ಜೂ.14: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಸುಬ್ರಹ್ಮಣ್ಯ-ಸಿರಿಬಾಗಿಲು ಮಧ್ಯೆ ರೈಲ್ವೆ ಹಳಿ ಮೇಲೆ ಭೂಕುಸಿತ ಉಂಟಾದ ಪರಿಣಾಮ ಬೆಂಗಳೂರು-ಮಂಗಳೂರು ಮಧ್ಯೆ ರೈಲು ಸಂಚಾರ ಸ್ಥಗಿತಗೊಂಡಿದೆ.
ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ಬುಧವಾರ ಮತ್ತು ಗುರುವಾರ ವ್ಯಾಪವಕಾಗಿ ಮಳೆಯಾಗುತ್ತಿದ್ದು, ಸುಬ್ರಹ್ಮಣ್ಯ-ಸಿರಿಬಾಗಿಲು ಮಧ್ಯಭಾಗದಲ್ಲಿ (ಹಾಸನದಿಂದ 86ಕಿ.ಮೀ. ಅಂತರ) ಹಠಾತ್ ಭೂಕುಸಿತ ಉಂಟಾಗಿದೆ. ಇದರಿಂದ ರೈಲ್ವೆ ಹಳಿಯ ಮೇಲೆ ಮಣ್ಣು ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ.
ಇದರಿಂದ 10.50ಕ್ಕೆ ಮಂಗಳೂರಿನಿಂದ ಹೊರಟಿದ್ದ ಕಾರವಾರ-ಬೆಂಗಳೂರು ರೈಲು ಸುಬ್ರಹ್ಮಣ್ಯವರೆಗೆ ಸಂಚರಿಸಿ ಬಳಿಕ ತುರ್ತು ಸೂಚನೆ ಹಿನ್ನೆಲೆಯಲ್ಲಿ ಮುಂದಿನ ಪ್ರಯಾಣ ರದ್ದುಗೊಳಿಸಿ ಮರಳಿ ಮಂಗಳೂರಿಗೆ ಪ್ರಯಾಣ ಬೆಳೆಸಿದೆ. ಅದೇ ರೀತಿ ಬೆಳಗ್ಗೆ ಬೆಂಗಳೂರಿನಿಂದ ಮಂಗಳೂರಿನತ್ತ ಹೊರಟಿದ್ದ ರೈಲು ಸಕಲೇಶಪುರವರೆಗೆ ಬಂದಿದ್ದು, ಪ್ರಯಾಣ ಮೊಟಕುಗೊಳಿಸಿ ಮರಳಿ ಬೆಂಗಳೂರಿಗೆ ತೆರಳಿದೆ ಎಂದು ತಿಳಿದುಬಂದಿದೆ.
ತೆರವು ಕಾರ್ಯ ಮುಂದುವರಿಕೆ
ಭೂಕುಸಿತದಿಂದ ರೈಲ್ವೆ ಹಳಿಯ ಮೇಲೆ ಮಣ್ಣು ಬಿದ್ದಿದ್ದು ಜೆಸಿಬಿ ಮುಖೇನ ತೆರವು ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ. ರೈಲ್ವೆ ಅಧಿಕಾರಿಗಳು ಸ್ಥಳದಲ್ಲಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.