ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಎಂದೂ ಮರೆಯಲಾಗದ ವಿವಾದಗಳು

Update: 2018-06-14 12:39 GMT

ಮಾಸ್ಕೊ, ಜೂ.14: ಫುಟ್ ಬಾಲ್ ವಿಶ್ವಕಪ್ ಆರಂಭವಾಗುತ್ತಿದ್ದಂತೆ ವಿಶ್ವಾದ್ಯಂತ ಸಂಭ್ರಮ ಮುಗಿಲುಮುಟ್ಟಿದೆ. ಕೋಟ್ಯಾಂತರ ಜನರು ತುದಿಗಾಲಲ್ಲಿ ಕಾಯುತ್ತಿರುವ 'ಫಿಫಾ' ವಿಶ್ವಕಪ್ ನ ಇತಿಹಾಸದಲ್ಲಿ ಕೆಲವು ವಿವಾದಗಳ ಕಪ್ಪು ಚುಕ್ಕೆಗಳೂ ಇವೆ. ಝೈನುದ್ದೀನ್ ಝೈದಾನ್ ತಲೆಯಲ್ಲಿ ಗುದ್ದಿದ್ದರಿಂದ ಹಿಡಿದು, ಲೂಯಿಸ್ ಸ್ವಾರೆಝ್ ಅವರ ಕಚ್ಚಿದ ನಿದರ್ಶನದವರೆಗೆ ವಿಶ್ವಕಪ್‍ನ ಇತಿಹಾಸದಲ್ಲಿ ಹಲವು ವಿವಾದಾತ್ಮಕ ಘಟನೆಗಳಿವೆ.

ಸ್ವಾರೆಝ್ ಕಚ್ಚಿದ ಘಟನೆ: 2014ರ ವಿಶ್ವಕಪ್‍ನ ಗ್ರೂಪ್ ಪಂದ್ಯಗಳಲ್ಲಿ ಇಂಗ್ಲೆಡ್ ವಿರುದ್ದ ಗೆಲುವು ಸಾಧಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಎರಡು ಗೊಲು ದಾಖಲಿಸಿದ್ದ ಉರುಗ್ವೆ ಆಗಾರ ಲೂಯಿಸ್ ಸ್ವಾರೆಝ್, ತಮ್ಮ ತಂಡ ಮುಂದಿನ ಸುತ್ತು ತಲುಪಲು ಇಟಲಿ ವಿರುದ್ಧದ ಪಂದ್ಯದಲ್ಲಿ ಗೋಲು ಗಳಿಸುವ ಅನಿವಾರ್ಯತೆಯಲ್ಲಿದ್ದರು. ಈ ಹಂತದಲ್ಲಿ ಪೆನಾಲ್ಟಿ ಏರಿಯಾದಲ್ಲಿ ಇಟಲಿಯ ರಕ್ಷಣಾ ಆಟಗಾರ ಜಾರ್ಜಿಯೊ ಚಿಲಿನಿ ಅವರ ಭುಜ ಕಚ್ಚಿದರು. ರೆಫ್ರಿ ಈ ಘಟನೆ ಗಮನಿಸಲಿಲ್ಲ. ಉರುಗ್ವೆ ತಕ್ಷಣ ಒಂದು ಗೋಲು ದಾಖಲಿಸಿತು. ಆದರೆ ಘಟನೆ ಹಿನ್ನೆಲೆಯಲ್ಲಿ ಸ್ವಾರೆಝ್, ಎಲ್ಲ ಫುಟ್‍ಬಾಲ್‍ನಿಂದ ನಾಲ್ಕು ತಿಂಗಳ ನಿಷೇಧಕ್ಕೆ ಗುರಿಯಾದರು. ದೊಡ್ಡ ಮೊತ್ತದ ದಂಡ ಹಾಗೂ 9 ಪಂದ್ಯಗಳ ನಿಷೇಧ ಅನುಭವಿಸಬೇಕಾಯಿತು.

2010- ದೇವರ ಕೈಯಲ್ಲ: ಉರುಗ್ವೆ ಮತ್ತು ಘಾನಾ ನಡುವಿನ ಕ್ವಾರ್ಟರ್ ಫೈನಲ್‍ನಲ್ಲಿ ಲೂಯಿಸ್ ಸ್ವಾರೆಝ್ ಎದುರಾಳಿ ತಂಡದ ಡೊಮಿನಿಕ್ ಅವರ ಹೆಡ್ಡರ್ ಗೋಲಾಗುವುದನ್ನು ಕೈಯಲ್ಲಿ ತಡೆದರು. ಅಸಮೋಹ್ ಗ್ಯಾನ್ ಹೊಡೆದ ಚೆಂಡು ಕಂಬಕ್ಕೆ ಬಡಿಯಿತು. ಸ್ವಾರೆಝ್ ತೆರೆಯಲ್ಲಿ ಸಂಭ್ರಮಿಸುತ್ತಿದ್ದರು. ಘಾನಾ ಪೆನಾಲ್ಟಿ ಶೂಟೌಟನ್ನು ಗೋಲಾಗಿ ಪರಿವರ್ತಿಸಲು ವಿಫಲವಾಗಿ, ವಿಶ್ವಕಪ್ ಸೆಮಿಫೈನಲ್ ತಲುಪಿದ ಮೊದಲ ಆಫ್ರಿಕನ್ ತಂಡ ಎಂಬ ಹೆಗ್ಗಳಿಕೆಯಿಂದ ವಂಚಿತವಾಯಿತು.

2006- ತಲೆಯಿಂದ ಗುದ್ದಿದ ಝೈದಾನ್: 2006ರ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಹಾಗೂ ಇಟಲಿ ತಂಡಗಳ ಜಿದ್ದಾಜಿದ್ದಿಯಲ್ಲಿ ಫ್ರಾನ್ಸ್ ನ ಸ್ಟ್ರೈಕರ್ ಝೈದಾನ್, ಇಟಲಿಯ ಡಿಫೆಂಡರ್ ಮಾರ್ಕೊ ಮ್ಯಾಟರಝಿಯವರಿಗೆ ತಲೆಯಿಂದ ಗುದ್ದಿದರು. ಹೆಚ್ಚುವರಿ ಅವಧಿಯಲ್ಲಿ ಗೋಲು 1-1ರಲ್ಲಿ ಸಮನಾಗಿದ್ದಾಗ ಈ ಘಟನೆ ನಡೆದಿತ್ತು. ಝೈದಾನ್ ಕೆಂಪು ಕಾರ್ಡ್ ಪಡೆದರು ಹಾಗೂ ಮ್ಯಾಟರಝಿ ತಂಡ ಪೆನಾಲ್ಟಿಶೂಟೌಟ್‍ನಲ್ಲಿ 5-3 ಗೋಲುಗಳಿಂದ ಜಯ ಸಾಧಿಸಿತು. ಮ್ಯಾಟರಝಿ ಈ ಹಂತದಲ್ಲಿ ಫ್ರಾನ್ಸ್ ನಾಯಕನ ತಾಯಿಯನ್ನು ನಿಂದಿಸಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದು ಗೋಲ್ಡನ್‍ಬಾಲ್ ಪ್ರಶಸ್ತಿ ಪಡೆಯುವ ಝೈದಾನ್ ಆಸೆಗೆ ತಣ್ಣೀರೆರಚಿತು.

2006-ಒಬ್ಬ ಆಟಗಾರನಿಗೆ ಮೂರು ಹಳದಿಕಾರ್ಡ್: 2006ರಲ್ಲಿ ಇಂಗ್ಲೆಂಡ್ ರೆಫರಿ ಗ್ರಹಾಂ ಪೋಲ್ ಅವರು, ಕ್ರೊವೇಷಿಯಾ- ಆಸ್ಟ್ರೇಲಿಯಾ ಪಂದ್ಯದಲ್ಲಿ ಕ್ರೊವೇಷಿಯಾದ ಜೋಸಿಪ್ ಶಿಮುನಿಚ್ ಅವರಿಗೆ ಮೂರು ಬಾರಿ ಹಳದಿಕಾರ್ಡ್ ತೋರಿಸಿದರು. ಇದರಿಂದ ಕ್ರೊವೇಷಿಯಾ 10 ಆಟಗಾರರೊಂದಿಗೆ ಪಂದ್ಯ ಆಡಬೇಕಾಯಿತು.

2002-ಮ್ಯಾಚ್‍ಫಿಕ್ಸಿಂಗ್: 2002ರಲ್ಲಿ ಅತಿಥೇಯ ದಕ್ಷಿಣ ಕೊರಿಯಾ ಮ್ಯಾಚ್‍ಫಿಕ್ಸಿಂಗ್ ಆರೋಪಕ್ಕೆ ಗುರಿಯಾಯಿತು. ಸೆಮಿಫೈನಲ್‍ಗೆ ಮುನ್ನಡೆಯುವ ಹಾದಿಯಲ್ಲಿ 16ರ ಘಟ್ಟದ ಪಂದ್ಯದಲ್ಲಿ ದಕ್ಷಿಣ ಕೊರಿಯಾವು ಇಟಲಿ ಹಾಗೂ ಎಂಟರಘಟ್ಟದಲ್ಲಿ ಸ್ಪೇನ್‍ ತಂಡವನ್ನು ಬಗ್ಗುಬಡಿದಿತ್ತು. ಆದರೆ ಉಪಾಂತ್ಯದಲ್ಲಿ ಜರ್ಮನಿ ವಿರುದ್ಧ 1-0 ಗೋಲುಗಳಿಂದ ಸೋಲು ಅನುಭವಿಸಿತು. ಪ್ರಿಕ್ವಾರ್ಟರ್ ಫೈನಲ್ ಮತ್ತು ಕ್ವಾರ್ಟರ್ ಫೈನಲ್ ಹಂತದ ಪಂದ್ಯಗಳಲ್ಲಿ ರೆಫ್ರಿಗಳು ಮ್ಯಾಚ್‍ಫಿಕ್ಸಿಂಗ್‍ನಲ್ಲಿ ಸಿಲುಕಿದ್ದರು. ಇದು ಅವರ ಕಡ್ಡಾಯ ನಿವೃತ್ತಿಗೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News