ತಲೆಗೆ ಹೊಡೆದು ದನದ ವ್ಯಾಪಾರಿ ಹುಸೇನಬ್ಬ ಕೊಲೆ: ಮರಣೋತ್ತರ ಪರೀಕ್ಷೆ ವರದಿಯಲ್ಲಿ ದೃಢ
ಉಡುಪಿ, ಜೂ.14: ಪೆರ್ಡೂರು ಬಳಿ ಜೋಕಟ್ಟೆ ದನದ ವ್ಯಾಪಾರಿ ಹುಸೇನಬ್ಬ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಮರಣೋತ್ತರ ಪರೀಕ್ಷಾ ವರದಿಯನ್ನು ಪ್ರಕರಣದ ತನಿಖಾಧಿಕಾರಿಗಳು ಇಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಇದರಲ್ಲಿ ಹುಸೇನಬ್ಬರ ಸಾವಿಗೆ ತಲೆಗೆ ಆಗಿರುವ ಗಾಯವೇ ಕಾರಣ ಎಂದು ಹೇಳಲಾಗಿದೆ.
ಪ್ರಕರಣದ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆಗೆ ಸಂಬಂಧಿಸಿ ನ್ಯಾಯಾಲಯವು ಹುಸೇನಬ್ಬ ಸಾವಿನ ಮರಣೋತ್ತರ ಪರೀಕ್ಷಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಪ್ರಕರಣದ ತನಿಖಾಧಿಕಾರಿಗಳಿಗೆ ಜೂ.13ರಂದು ನೋಟೀಸು ಜಾರಿ ಮಾಡಿತ್ತು. ಅದರಂತೆ ಪ್ರಕರಣದ ತನಿಖಾಧಿಕಾರಿಯಾಗಿರುವ ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಹೃಷಿಕೇಶ ಸೋನಾವಣೆ ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಅವರ ಮೂಲಕ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಟಿ. ಅವರಿಗೆ ಇಂದು ವರದಿ ಸಲ್ಲಿಸಿದರು.
ಮಣಿಪಾಲ ಆಸ್ಪತ್ರೆಯ ವೈದ್ಯರು ನೀಡಿದ ಈ ವರದಿಯಲ್ಲಿ ಹುಸೇನಬ್ಬರ ಸಾವಿಗೆ ತಲೆಯಲ್ಲಿ ಆಗಿರುವ ಗಾಯವೇ ಕಾರಣ ಎಂದು ಉಲ್ಲೇಖಿಸಲಾಗಿದೆ. ಇದರಿಂದ ಹುಸೇನಬ್ಬರ ತಲೆಗೆ ಹೊಡೆದು ಕೊಲೆ ಮಾಡಿರುವುದು ದೃಢಪಟ್ಟಿದೆ. ಇದೊಂದು ಕೊಲೆ ಎಂಬುದನ್ನು ಪೊಲೀಸ್ ಮೂಲಗಳು ಕೂಡ ಸ್ಪಷ್ಟಪಡಿಸಿವೆ. ಮೃತರ ರಕ್ತದ ಗುಂಪು ಸೇರಿದಂತೆ ಇತರ ಪರೀಕ್ಷೆಗಳ ವಿಧಿ ವಿಜ್ಞಾನದ ಪ್ರಯೋಗಾಲಯದ ವರದಿಯು ಇನ್ನು ಎರಡು ಮೂರು ತಿಂಗಳಲ್ಲಿ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಜೂ. 18ರಂದು ಆದೇಶ: ಪ್ರಕರಣದ ಆರೋಪಿಗಳಾದ ಹಿರಿಯಡ್ಕ ಎಸ್ಸೈ ಸೇರಿದಂತೆ ಮೂವರು ಪೊಲೀಸರು ಹಾಗೂ ಏಳು ಮಂದಿ ಬಜರಂಗದಳ ಕಾರ್ಯಕರ್ತರ ಜಾಮೀನು ಅರ್ಜಿ ವಿಚಾರಣೆಗೆ ಸಂಬಂಧಿಸಿ, ಇಂದು ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಅಂತಿಮ ಆದೇಶವನ್ನು ಜೂ.18ರಂದು ನೀಡುವುದಾಗಿ ಪ್ರಕಟಿಸಿದರು.
ಎಸ್ಸೈ ಡಿ.ಎನ್. ಕುಮಾರ್, ಹೆಡ್‌ಕಾನ್‌ಸ್ಟೇಬಲ್ ಮೋಹನ್ ಕೊತ್ವಾಲ್, ಚಾಲಕ ಗೋಪಾಲ್ ಪರ ಕ್ರಮವಾಗಿ ವಕೀಲರಾದ ಶಾಂತರಾಮ್ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ, ಎ.ಸಂಜೀವ ಜಾಮೀನಿಗಾಗಿ ವಾದ ಮಂಡಿಸಿದ್ದರು. ಪ್ರಕರಣದ ಪ್ರಮುಖ ಆರೋಪಿ ಸುರೇಶ್ ಮೆಂಡನ್ ಯಾನೆ ಸೂರಿ ಸಹಿತ ಇತರ ಏಳು ಮಂದಿ ಬಜರಂಗದಳ ಕಾರ್ಯಕರ್ತರ ಜಾಮೀನು ಮತ್ತು ತಲೆ ಮರೆಸಿಕೊಂಡಿರುವ ಆರೋಪಿ ತುಕಾರಾಮ್‌ಗೆ ನಿರೀಕ್ಷಣಾ ಜಾಮೀನಿಗಾಗಿ ವಕೀಲ ಮಟ್ಟಾರು ರತ್ನಾಕರ ಹೆಗ್ಡೆ ವಾದಿಸಿದ್ದರು.
ಇದಕ್ಕೆ ಆಕ್ಷೇಪಣೆ ಸಲ್ಲಿಸಿದ ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿಬಾಯಿ, ಜೂ.13ರಂದು ಪ್ರತಿ ವಾದ ಮಂಡಿಸಿದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಇದರ ಅಂತಿಮ ಆದೇಶವನ್ನು ಜೂ.18ಕ್ಕೆ ನೀಡುವುದಾಗಿ ಇಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿಬಾಯಿ, ಆರೋಪಿ ಪರ ವಕೀಲರು ಹಾಜರಿದ್ದರು.
ಜೂ.15ರಂದು ಆರೋಪಿಗಳು ಕೋರ್ಟಿಗೆ ಹಾಜರು
ಹುಸೇನಬ್ಬ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಹಿರಿಯಡ್ಕ ಎಸ್ಸೈ ಡಿ.ಎನ್.ಕುಮಾರ್ ಸೇರಿದಂತೆ 10 ಮಂದಿ ಆರೋಪಿ ಗಳನ್ನು ಪೊಲೀಸರು ಜೂ. 15ರಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.ಜೂ. 2ರಂದು ಬಂಧಿಸಲ್ಪಟ್ಟ ಪ್ರಮುಖ ಆರೋಪಿ ಸೂರಿ ಸೇರಿದಂತೆ ನಾಲ್ವರನ್ನು ಪೊಲೀಸ್ ಕಸ್ಟಡಿ ಪಡೆದು ಜೂ. 5ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅದೇ ರೀತಿ ಎಸ್ಸೈ ಸಹಿತ ಆರು ಮಂದಿಗೆ ಜೂ. 3ರಂದು ಬಂಧಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಇವರೆಲ್ಲರಿಗೂ ಜೂ. 15ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕಾರವಾರ ಜೈಲಿಗೆ ಕಳುಹಿಸಲಾಗಿತ್ತು.