×
Ad

'ಪ್ರಾಕೃತಿಕ ವಿಕೋಪ ಪರಿಹಾರಕ್ಕೆ ಅನುದಾನದ ಕೊರತೆ ಇಲ್ಲ'

Update: 2018-06-14 21:30 IST

ಉಡುಪಿ, ಜೂ.14: ಪ್ರಾಕೃತಿಕ ವಿಕೋಪಕ್ಕೆ ಪರಿಹಾರ ನೀಡಲು ಹಣದ ಕೊರತೆ ಕಾರಣವಾಗಬಾರದು. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ. ಪರಿಹಾರ ವಿತರಿಸಲು ಅನುಕೂಲ ವಾಗುವಂತೆ ಕನಿಷ್ಠ 10 ಲಕ್ಷ ರೂ ಅನುದಾನ ಮೊತ್ತವನ್ನು ತಹಶೀಲ್ದಾರ್, ಸಹಾಯಕ ಆಯುಕ್ತರ ಖಾತೆಗಳಿಗೂ ವರ್ಗಾಯಿಸಿ. ಇದರಿಂದ ಪರಿಹಾರ ನೀಡಲು ಸುಲಭವಾಗಲಿದೆ ಎಂದು ಕಂದಾಯ ಹಾಗೂ ಕೌಶಲಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

ಇತ್ತೀಚಿನ ಪ್ರಾಕೃತಿಕ ವಿಕೋಪದಿಂದ ನಲುಗಿದ ಉದ್ಯಾವರದ ಹಲವು ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ಕಂದಾಯ ಇಲಾಖಾ ಕಾರ್ಯ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸಚಿವ ದೇಶಪಾಂಡೆ ಮಾತನಾಡುತ್ತಿದ್ದರು.

ಈಗಾಗಲೇ ಪ್ರಾಕೃತಿಕ ವಿಕೋಪಕ್ಕೆ ತುರ್ತು ಪರಿಹಾರವನ್ನು ವಿತರಿಸಲಾಗಿದೆ. ಮನೆಯ ಮೇಲೆ ಮರ ಬಿದ್ದಿರುವುದನ್ನು ಸಂಪೂರ್ಣ ಹಾನಿ ಎಂದೇ ಪರಿಗಣಿಸಿ ಪರಿಹಾರ ವಿತರಿಸಿ ಎಂದ ಸಚಿವರು, ಮರ ಬಿದ್ದ ಮನೆ ಭಾಗಶ: ಹಾನಿ ಎಂದು ಹೇಗೆ ಪರಿಗಣಿಸುತ್ತೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಮತ್ತೊಮ್ಮೆ ಮನೆ ಹಾನಿ ಪ್ರಕರಣಗಳನ್ನು ಪರಿಶೀಲಿಸಿ ನೊಂದವರಿಗೆ ಪರಿಹಾರ ವಿತರಿಸಿ. ಪರಿಹಾರ ವಿತರಣೆಯಲ್ಲಿ ಉದಾರ ಮನೋಭಾವ ತೋರಿ ಎಂದು ಹೇಳಿದರು.

ಪ್ರಾಕೃತಿಕ ವಿಕೋಪ ಸಂಭವಿಸಿದಾಗ ನೊಂದವರಿಂದ ಅರ್ಜಿಗಳನ್ನು ನಿರೀಕ್ಷಿಸದೆ ಸಂಬಂಧಪಟ್ಟ ಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ನೊಂದವರಿಗೆ ಸಾಂತ್ವನದ ಭರವಸೆಯನ್ನು ನೀಡುವಂತಾಗಬೇಕು. ಈ ವೇಳೆ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಂಪರ್ಕ ಸಾಧಿಸಿ. ಅವರ ಅಭಿಪ್ರಾಯವನ್ನು ಪರಿಗಣಿಸಿ, ಇದರಿಂದ ಉತ್ತಮ ಆಡಳಿತ ಸಾಧ್ಯವಾಗಲಿದೆ ಎಂದರು.

ಕುಡಿಯುವ ನೀರು, ಪಶುಸಂಗೋಪನಾ ಇಲಾಖೆ, ತೋಟಗಾರಿಕೆ, ಕೃಷಿ, ಮೆಸ್ಕಾಂ, ಅರಣ್ಯ, ಲೋಕೋಪಯೋಗಿ, ಆರೋಗ್ಯ ಇಲಾಖೆಗಳ ಕಾರ್ಯಕ್ರಮ ಗಳ ಪ್ರಗತಿ ಪರಿಶೀಲಿಸಿದ ಸಚಿವರು, ರೈತರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು. ಜೂನ್-ಜುಲೈ ತಿಂಗಳಲ್ಲಿ ಹೆಚ್ಚಿನ ಮಳೆಯಾಗಲಿದ್ದು, ಅಧಿಕಾರಿಗಳು ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡಕೂಡದು ಎಂದು ಆದೇಶಿಸಿದರು. ವಾರಕ್ಕೊಮ್ಮೆ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯನ್ನು ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಕರೆಯಲು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಸೂಚಿಸಿದರು.

ಸಭೆಗೆ ಹಾಜರಾಗದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಶೋಕಾಸ್ ನೋಟೀಸು ನೀಡಲು ಸೂಚಿಸಿದ ಸಚಿವರು, ಪ್ರಗತಿ ಪರಿಶೀಲನಾ ಸಭೆಗೆ ಗೈರುಹಾಜರಾ ಗುವುದನ್ನು ಸಹಿಸುವುದಿಲ್ಲ ಎಂದರು. ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಗಮನಸೆಳೆದರು. ಜಿಲ್ಲೆಯಲ್ಲಿ ರೋಗ ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ ಡಿಎಚ್‌ಒ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಪ್ರಾಕೃತಿಕ ವಿಕೋಪ ಸಂಭವಿಸಿ ದಾಗ ಜಿಲ್ಲಾಡಳಿತ ಕೈಗೊಂಡ ಕ್ರಮಗಳನ್ನು ಪಿಪಿಟಿ ಮೂಲಕ ವಿವರಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ರಘುಪತಿ ಭಟ್, ಸಾಮಾನ್ಯ ಜನರಿಗೆ ಭೂ ಪರಿವರ್ತನೆಗೆ ಬಹಳ ತೊಂದರೆಯಾಗಿದೆ ಎಂದು ಗಮನಸೆಳೆದರಲ್ಲದೇ, ಪ್ರಾಕೃತಿಕ ವಿಕೋಪ ಸಂಬಂಧ ಜಿಲ್ಲೆಯಲ್ಲಿ ಸಂಭವಿಸಿದ ನಷ್ಟಕ್ಕೆವಿಶೇಷ ಅನುದಾನ ನೀಡುವಂತೆ ಸಚಿವರನ್ನು ಕೋರಿದರು. ಕಾಪು ಶಾಸಕ ಲಾಲಾಜಿ ಮೆಂಡನ್, ಕಾಪು ತಾಲೂಕಿನ ಸಮ್ಯೆಗಳ ಬಗ್ಗೆ  ಗಮನ ಸೆಳೆದರು.

ಶಾಸಕ ಪ್ರತಾಪ್‌ಚಂದ್ರ ಶೆಟ್ಟಿ, ಕುಂದಾಪುರ ವಿಭಾಗದಲ್ಲಿ ಮೆಸ್ಕಾಂ ತುರ್ತು ಸ್ಪಂದನೆ ಮಾಡಿಲ್ಲ ಎಂದು ಸಚಿವರ ಗಮನಸೆಳೆದರಲ್ಲದೆ, ತೋಟಗಾರಿಕೆ ಬೆಳೆ, ರಬ್ಬರ್ ಪ್ಲಾಂಟೇಷನ್‌ಗಾದ ನಷ್ಟಕ್ಕೆ ಶೀಘ್ರ ಪರಿಹಾರದ ಚೆಕ್ ವಿತರಿಸುವಂತೆ ಮನವಿ ಮಾಡಿದರು. ತೋಟಗಾರಿಕೆಗೆ ಸಂಬಂಧಿಸಿದಂತೆ ಕುಂದಾಪುರದಲ್ಲಿ ಹೆಚ್ಚಿನ ನಷ್ಟವಾಗಿದೆ. ತಮ್ಮ ಪ್ರದೇಶದಲ್ಲೂ ವಿದ್ಯುತ್ ಇಲ್ಲದೆ ನಾಲ್ಕು ದಿನವಾಗಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದರು.

ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷ ಶೀಲಾ ಶೆಟ್ಟಿ, ಸದಸ್ಯ ಜನಾರ್ದನ ತೋನ್ಸೆ, ಸಿಇಒ ಶಿವಾನಂದ ಕಾಪಶಿ, ಸಹಾಯಕ ಆಯುಕ್ತ ಭೂಬಾಲನ್ ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಅನುರಾಧ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News