ರಕ್ತ ಸಂಗ್ರಹದಲ್ಲಿ ಮೊಗವೀರ ಯುವ ಸಂಘಟನೆ ದಾಖಲೆ: ಭಟ್
ಬ್ರಹ್ಮಾವರ, ಜೂ.14: ಕಳೆದ 10 ವರ್ಷಗಳಲ್ಲಿ 650ಕ್ಕೂ ಅಧಿಕ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ಸಂಘಟಿಸಿ ಒಂದು ಲಕ್ಷಕ್ಕೂ ಅಧಿಕ ಯುನಿಟ್ ರಕ್ತ ಸಂಗ್ರಹಿಸುವ ತಮ್ಮ ಗುರಿಯನ್ನು ಸಾಧಿಸಿದ ಉಡುಪಿ ಜಿಲ್ಲೆ ಮೊಗವೀರ ಯುವ ಸಂಘಟನೆ ಹಾಗೂ ಅಂಬಲಪಾಡಿಯ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಸಾಧನೆ ಅದ್ವಿತೀಯ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.
ಮೊಗವೀರ ಯುವ ಸಂಘಟನೆ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಇವರ ನೇತೃತ್ವದಲ್ಲಿ ಜಿಲ್ಲಾಡಳಿತ ಹಾಗೂ ಮಣಿಪಾಲ ಕೆಎಂಸಿ ರಕ್ತನಿಧಿಯ ಸಹಯೋಗದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬ್ರಹ್ಮಾವರದ ಶ್ಯಾಮಿಲಿ ಶನಾಯದಲ್ಲಿ ಇಂದು ನಡೆದ ಒಂದು ಲಕ್ಷ ಯುನಿಟ್ ರಕ್ತ ಸಂಗ್ರಹಿಸುವ ಗುರಿಯ ಸಾಧನೆ ಹಾಗೂ ರಕ್ತದಾನ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಾನವನ ರಕ್ತಕ್ಕೆ ಈವರೆಗೆ ಪರ್ಯಾಯವೇ ಬಂದಿಲ್ಲ. ಆದುದರಿಂದ ಶಿಬಿರದಿಂದ ಸಂಗ್ರಹವಾಗುವ ರಕ್ತದಿಂದ ಎಷ್ಟೊಂದು ಜನರ ಪ್ರಾಣ ಉಳಿಯು ವಂತಾಗಿದೆ. ಹೀಗಾಗಿ ಇಂಥ ಶಿಬಿರಗಳ ಸಂಘಟನೆಯಲ್ಲಿ ಜಿಲ್ಲಾಡಳಿತದ ಪಾತ್ರವೂ ಇದ್ದು, ಅದು ಸಕ್ರೀಯವಾಗಿ ಪಾಲ್ಗೊಳ್ಳುವ ಬಗ್ಗೆ ಚಿಂತಿಸಬೇಕಾಗಿದೆ ಎಂದು ಅವರು ನುಡಿದರು.
ಬ್ರಹ್ಮಾವರಕ್ಕೆ ಯುಜಿಡಿ: ತಾಲೂಕಾಗಿ ಘೋಷಿಸಲ್ಪಟ್ಟಿರುವ ಬ್ರಹ್ಮಾವರದಲ್ಲಿ ಒಳಚರಂಡಿ ವ್ಯವಸ್ಥೆ ಬಹು ದೊಡ್ಡ ಸಮಸ್ಯೆಯಾಗಿದೆ. ಬ್ರಹ್ಮಾವರ ತಾಲೂಕು ಕೆಲಸದೊಂದಿಗೆ ಬ್ರಹ್ಮಾವರವನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಪ್ರಯತ್ನ ನಡೆಸುವುದಾಗಿ ತಿಳಿಸಿದ ರಘುಪತಿ ಭಟ್, ಇದರಿಂದ ಸ್ವಾಭಾವಿಕವಾಗಿ ಒಳಚರಂಡಿ (ಯುಜಿಡಿ) ವ್ಯವಸ್ಥೆ ಇಲ್ಲಿಗೆ ಬರಲಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್, ಕಳೆದ 10 ವರ್ಷಗಳಿಂದ ಒಂದು ಲಕ್ಷಕ್ಕೂ ಅಧಿಕ ಯುನಿಟ್ ರಕ್ತ ಸಂಗ್ರಹದ ಗುರಿಯನ್ನು ತಲುಪಿದ್ದೇವೆ. ರಕ್ತದಾನ ಶಿಬಿರ ಮುಂದೆಯೂ ನಡೆಯಲಿದೆ. ರಕ್ತದಾನ ಶಿಬಿರವನ್ನು ಲಾಭಕ್ಕಾಗಿ ನಾವು ಮಾಡುತ್ತಿಲ್ಲ. ಇದಕ್ಕೆ ಜಿಲ್ಲಾಡಳಿತದ ಸಹಾಯ, ಸಹಕಾರವೂ ಅಗತ್ಯವಿದೆ ಎಂದರು.
ಇದೇ ಸಂದರ್ಭದಲ್ಲಿ 50ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ ದಾನಿಗಳನ್ನು, ಶಿಬಿರಕ್ಕಾಗಿ ಶ್ರಮಿಸಿದವರನ್ನು, ಕೆಎಂಸಿಯ ರಕ್ತನಿಧಿಯ ವೈದ್ಯರು, ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಮಣಿಪಾಲ ಮಾಹೆಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಉಡುಪಿ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಜಯಕರ ಶೆಟ್ಟಿ, ಮಂಗಳೂರು ರೆಡ್‌ಕ್ರಾಸ್‌ನ ಪ್ರತಿನಿಧಿ ಯತೀಶ್ ಬೈಕಂಪಾಡಿ, ಬ್ರಹ್ಮಾವರ ತಹಶೀಲ್ದಾರ್ ಭಾರತಿ, ದ.ಕ., ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್‌ನ ಅಧ್ಯಕ್ಷ ಯಶ್ಪಾಲ್ ಸುವರ್ಣ, ಉದ್ಯಮಿ ಆನಂದ ಸಿ.ಕುಂದರ್, ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ವಿನಯ್ ಕರ್ಕೇರ ಉಪಸ್ಥಿತರಿದ್ದರು.
ಮೊಗವೀರ ಯುವ ಸಂಘಟನೆಯ ನಿಕಟಪೂರ್ವ ಅಧ್ಯಕ್ಷ ಗಣೇಶ ಕಾಂಚನ್ ಸ್ವಾಗತಿಸಿದರೆ, ಪ್ರಧಾನ ಕಾರ್ಯದರ್ಶಿ ಸತೀಶ್ ಮರಕಾಲ ವಂದಿಸಿದರು. ಉಪಾಧ್ಯಕ್ಷ ಶಿವರಾಮ್ ಕೆಎಂ ಕಾರ್ಯಕ್ರಮ ನಿರೂಪಿಸಿದರು.
ಸಹಕಾರ ನೀಡದಿದ್ದರೆ, ಶೇ.25 ರಕ್ತ ನೀಡುವುದಿಲ್ಲ
ಕಳೆದ 10 ವರ್ಷಗಳಿಂದ ನಾವು ರಕ್ತದಾನ ಶಿಬಿರವನ್ನು ಯಾವುದೇ ಲಾಭದ ಆಸೆಯಿಂದ ಮಾಡುತ್ತಿಲ್ಲ. ಇದಕ್ಕೆ ಜಿಲ್ಲಾಡಳಿತವೂ ಕೈಜೋಡಿಸಬೇಕು. ಆದರೆ ನಮಗೆ ಜಿಲ್ಲಾಡಳಿತ ಸರಿಯಾದ ಸಹಕಾರ ನೀಡುತ್ತಿಲ್ಲ. ಆದರೆ ಪ್ರತಿ ಶಿಬಿರದಲ್ಲಿ ಸಂಗ್ರಹವಾದ ರಕ್ತದಲ್ಲಿ ಶೇ.25ನ್ನು ನಾವು ಜಿಲ್ಲಾಸ್ಪತ್ರೆಗೆ ನೀಡಬೇಕಾಗಿದೆ ಎಂದು ಡಾ.ಜಿ.ಶಂಕರ್ ನುಡಿದರು.
ಇನ್ನು ಮುಂದೆ ಜಿಲ್ಲಾಡಳಿತ, ಶಿಬಿರ ಸಂಘಟನೆಯಲ್ಲಿ ನಮ್ಮಂದಿಗೆ ಕೈಜೋಡಿ ಸದಿದ್ದರೆ ನಾವು ಅವರಿಗೆ ನೀಡುವ ಶೇ.25 ಯುನಿಟ್ ರಕ್ತ ಇನ್ನು ಮುಂದೆ ಕೊಡುವುದಿಲ್ಲ. ಅದನ್ನು ಕೆಎಂಸಿಗೆ ನೀಡಿ ಅವರ ಮೂಲಕ ಬಡವರಿಗೆ ಅದು ಸಿಗುವಂತೆ ನೋಡಿಕೊಳ್ಳುತ್ತೇವೆ ಎಂದು ಜಿ.ಶಂಕರ್ ಹೇಳಿದರು.