ವಿಹಿಂಪ ಮತ್ತು ಬಜರಂಗ ದಳ ಉಗ್ರಗಾಮಿ ಧಾರ್ಮಿಕ ಸಂಘಟನೆಗಳು: ಅಮೆರಿಕದ ಸಿಐಎ

Update: 2018-06-14 16:58 GMT

ಹೊಸದಿಲ್ಲಿ,ಜೂ.14: ಅಮೆರಿಕದ ಸಿಐಎ ಇತ್ತೀಚಿಗೆ ಪರಿಷ್ಕರಿಸಿರುವ ತನ್ನ ‘ವರ್ಲ್ಡ್ ಫ್ಯಾಕ್ಟ್‌ಬುಕ್’ನಲ್ಲಿ ಸಂಘ ಪರಿವಾರದ ಸಂಘಟನೆಗಳಾದ ವಿಹಿಂಪ ಮತ್ತು ಬಜರಂಗ ದಳಗಳನ್ನು ಉಗ್ರಗಾಮಿ ಧಾರ್ಮಿಕ ಸಂಘಟನೆಗಳು ಎಂದು ವರ್ಗೀಕರಿಸಿದೆ.

ಸಿಐಎದ ಈ ಕ್ರಮ ಇವೆರಡೂ ಸಂಘಟನೆಗಳನ್ನು ರೊಚ್ಚಿಗೆಬ್ಬಿಸಿದ್ದು,ಅವು ಇದರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿದೆ. ಇದನ್ನು ಬಜರಂಗ ದಳವು ದೃಢಪಡಿಸಿದೆ.

ಕೆಲವು ದಿನಗಳ ಹಿಂದಷ್ಟೇ ಈ ವಿಷಯವು ನಮ್ಮ ಗಮನಕ್ಕೆ ಬಂದಿದೆ. ನಾವು ತಜ್ಞರೊಂದಿಗೆ ಸಮಾಲೋಚಿಸುತ್ತಿದ್ದೇವೆ ಮತ್ತು ಇದನ್ನು ಕಾನೂನು ಮೂಲಕ ಎದುರಿಸಲು ಬಯಸಿದ್ದೇವೆ ಎಂದು ಬಜರಂಗ ದಳದ ರಾಷ್ಟ್ರೀಯ ಸಂಚಾಲಕ ಮನೋಜ ವರ್ಮಾ ಸುದ್ದಿಗಾರರಿಗೆ ತಿಳಿಸಿದರು.

‘ರಾಜಕೀಯ ಒತ್ತಡ ಗುಂಪುಗಳು ಮತ್ತು ನಾಯಕರು’ ಶೀರ್ಷಿಕೆಯಡಿ ಇವೆರಡೂ ಸಂಘಟನೆಗಳನ್ನು ಉಗ್ರಗಾಮಿ ಧಾರ್ಮಿಕ ಸಂಘಟನೆಗಳು ಎಂದು ಹೆಸರಿಸಲಾಗಿದೆ ಮತ್ತು ಇದೇ ಶೀರ್ಷಿಕೆಯಡಿ ಇವುಗಳ ಸೈದ್ಧಾಂತಿಕ ಪೋಷಕ ಆರೆಸ್ಸೆಸ್‌ನ್ನು ರಾಷ್ಟ್ರೀಯವಾದಿ ಸಂಘಟನೆ ಎಂದು ಹೆಸರಿಸಲಾಗಿದೆ.

ಧಾರ್ಮಿಕ ದುರಭಿಮಾನಕ್ಕೂ ತಮಗೂ ಸಂಬಂಧವಿಲ್ಲ ಮತ್ತು ತಮ್ಮದೇನಿದ್ದರೂ ರಾಷ್ಟ್ರೀಯವಾದಿ ಮತ್ತು ಸಾಂಸ್ಕೃತಿಕ ಸಂಘಟನೆಗಳಾಗಿವೆ ಎಂದು ವಿಹಿಂಪ ಮತ್ತು ಬಜರಂಗ ದಳ ನಾಯಕರು ಹೇಳಿದ್ದಾರೆ.

 ಆಲ್ ಪಾರ್ಟೀಸ್ ಹುರಿಯತ್ ಕಾನ್ಪರೆನ್ಸ್(ಎಪಿಎಚ್‌ಸಿ)ನಂತಹ ಸಂಘಟನೆಗಳೊಂದಿಗೆ ತಮ್ಮನ್ನು ಸೇರಿಸಿರುವುದು ನಾಯಕರ ಕಣ್ಣುಗಳನ್ನು ಕೆಂಪಗಾಗಿಸಿದೆ. ಎಪಿಎಚ್‌ಸಿ ಪ್ರತ್ಯೇಕತಾವಾದಿ ಸಂಘಟನೆಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಏನಿದು ‘ವರ್ಲ್ಡ್ ಫ್ಯಾಕ್ಟ್‌ಬುಕ್’?

 ‘ವರ್ಲ್ಡ್ ಫ್ಯಾಕ್ಟ್‌ಬುಕ್’ ಅಮೆರಿಕವು ಮಾನ್ಯತೆ ನೀಡಿರುವ 266 ದೇಶಗಳ ಜನಸಂಖ್ಯೆ,ಭೌಗೋಳಿಕತೆ,ಸಂಪರ್ಕಗಳು,ಸರಕಾರ,ಆರ್ಥಿಕತೆ ಮತ್ತು ಮಿಲಿಟರಿ ಕುರಿತು ಮಾಹಿತಿಗಳನ್ನು ಒಳಗೊಂಡಿರುವ ಸಿಐಎದ ವಾರ್ಷಿಕ ಪ್ರಕಟಣೆಯಾಗಿದೆ ಎಂದು ಅದರ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ. ಅಮೆರಿಕದ ಅಧಿಕಾರಿಗಳ ಬಳಕೆಗಾಗಿ ಇದನ್ನು ಸಿದ್ಧಗೊಳಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News