ವಿಚಾರವಾದಿ ನರೇಂದ್ರ ನಾಯಕ್ ಹತ್ಯೆಗೆ ಸಂಚು ?
ಮಂಗಳೂರು, ಜೂ. 14: ವಿಚಾರವಾದಿ ಪ್ರೊ. ಕಲ್ಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್‌ರ ಹತ್ಯೆ ಬಳಿಕ ಮಂಗಳೂರು ಮೂಲದ ವಿಚಾರವಾದಿ ಪ್ರೊ.ನರೇಂದ್ರ ನಾಯಕ್ ಅವರ ಹತ್ಯೆಗೆ 3ನೆ ಬಾರಿ ಸಂಚು ರೂಪಿಸಲಾಗಿರುವ ಬಗ್ಗೆ ನರೇಂದ್ರ ನಾಯಕ್ ಪೊಲೀಸರಿಗೆ ದೂರು ನೀಡಿದ್ದಾರೆ.
ಅಪರಿಚಿತ ವ್ಯಕ್ತಿಯೋರ್ವ ನರೇಂದ್ರ ನಾಯಕ್ ಅವರ ಫ್ಲಾಟ್ ಮುಂದೆ ಅನುಮಾನಾಸ್ಪದವಾಗಿ ತಿರುಗಾಡಿದ್ದು, ಆತನ ಸಂಶಯಾಸ್ಪದ ನಡುವಳಿಕೆಯಿಂದ ಮತ್ತು ಈ ಹಿಂದೆ ಎರಡು ಬಾರಿ ಹತ್ಯೆಗೆ ಸಂಚು ರೂಪಿಸಿರುವ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ. ಜೂನ್ 12 ರ ಮಧ್ಯಾಹ್ನ ಅಪರಿಚಿತ ಯುವಕನೊಬ್ಬ ಪ್ರೊ.ನರೇಂದ್ರ ನಾಯಕ್ ಅವರು ವಾಸಿಸುವ ಮಂಗಳೂರಿನ ಫ್ಲಾಟ್‌ಗೆ ಬಂದಿದ್ದು, ತನ್ನ ಶಿಕ್ಷಕರೊಬ್ಬರಿಗೆ ಕೆಲಸದವರು ಬೇಕಾಗಿದ್ದಾರೆ ಎಂದು ಹೇಳಿಕೊಂಡಿದ್ದಾನೆ. ಆ ಯುವಕನ ವರ್ತನೆ ಬಗ್ಗೆ ಫ್ಲಾಟ್ ನ ವಾಚ್‌ಮ್ಯಾನ್ ಅನುಮಾನಗೊಂಡು ವಿಚಾರಿಸಿದಾಗ ಉತ್ತರಿಸಲಾಗದೆ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎಂದು ಹೇಳಲಾಗಿದೆ.
ಘಟನೆಗೆ ಸಂಬಂಧಿಸಿ ಪತ್ರಿಕೆಯೊಂದಿಗೆ ಮಾತನಾಡಿದ ವಿಚಾರವಾದಿ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್ ಅವರು, ಮಂಗಳವಾರ ಅಪರಿಚಿತನೊಬ್ಬ ತನ್ನ ಫ್ಲಾಟ್‌ನ ಮುಂದೆ ಶಂಕಾಸ್ಪದವಾಗಿ ವರ್ತಿಸಿದ್ದು, ಆತನ ನಡವಳಿಕೆಯಿಂದ ವಾಚ್‌ಮ್ಯಾನ್‌ಗೆ ಅನುಮಾನ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ವಾಚ್‌ಮ್ಯಾನ್ ಯುವಕನನ್ನು ವಿಚಾರಿಸಿದಾಗ ಸ್ಪಷ್ಟವಾಗಿ ಉತ್ತರಿಸದೆ ಪರಾರಿಯಾಗಿದ್ದಾನೆ. ಘಟನೆ ನಡೆದ ದಿನ ತಾನು ತಮಿಳುನಾಡಿನಲ್ಲಿದ್ದೆ. ಗುರುವಾರ ಮಂಗಳೂರಿಗೆ ಆಗಮಿಸಿದ್ದೇನೆ. ಘಟನೆಗೆ ಸಂಬಂಧಿಸಿ ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷದ ಮಾರ್ಚ್ ಮತ್ತು ನವೆಂಬರ್ ತಿಂಗಳಲ್ಲಿ ನನ್ನ ಕೊಲೆಗೆ ಯತ್ನಿಸಲಾಗಿತ್ತು. ಬೆದರಿಕೆಯೂ ಬಂದಿತ್ತು. ಇದೀಗ ಮಂಗಳವಾರ ಅಪರಿಚಿತ ಯುವಕ ನನ್ನ ಫ್ಲಾಟ್‌ನ ಮುಂದುಗಡೆ ಯಾಕಾಗಿ ತಿರುಗಾಡಿದ. ಯಾವ ಉದ್ದೇಶದಿಂದ ಬಂದಿದ್ದ ಗೊತ್ತಿಲ್ಲ. ಹಿಂದೆ ನಡೆದಿದ್ದ ಘಟನೆಗೆ ಸಂಬಂಧಿಸಿ ಜೀವ ಭಯದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದೆ. ಮಂಗಳವಾರ ನಡೆದ ಘಟನೆ ಬಗ್ಗೆಯೂ ದೂರು ನೀಡಿದ್ದೇನೆ.
- ಪ್ರೊ. ನರೇಂದ್ರ ನಾಯಕ್, ವಿಚಾರವಾದಿ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ