ಉ.ಪ್ರದೇಶ ಲೋಕಸೇವಾ ಆಯೋಗದ ಪರೀಕ್ಷೆಗೆ ತಡೆ ನೀಡಲು ಸುಪ್ರೀಂ ನಕಾರ

Update: 2018-06-14 17:09 GMT

ಹೊಸದಿಲ್ಲಿ, ಜೂ.14: ಉತ್ತರಪ್ರದೇಶ ಲೋಕಸೇವಾ ಆಯೋಗ(ಯುಪಿಪಿಎಸ್‌ಸಿ) ನಡೆಸುವ ಮೈನ್ಸ್ ಪರೀಕ್ಷೆಗೆ ತಡೆಯೊಡ್ಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಅಲ್ಲದೆ ಪ್ರಿಲಿಮಿನರಿ ಪರೀಕ್ಷೆಗಳ ಉತ್ತರ ಪತ್ರಿಕೆ ಮರು ವೌಲ್ಯಮಾಪನ ನಡೆಸಬೇಕೆಂಬ ಅಲಹಾಬಾದ್ ಹೈಕೋರ್ಟ್‌ನ ತೀರ್ಪನ್ನೂ ಸುಪ್ರೀಂ ಬದಿಗಿರಿಸಿದೆ.

 ಜೂನ್ 18ರಂದು ನಡೆಯಲಿರುವ ಲೋಕಸೇವಾ ಆಯೋಗದ ಮೈನ್ಸ್ ಪರೀಕ್ಷೆಗೆ ತಡೆ ನೀಡಬೇಕೆಂದು ಕೋರಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ರಜಾಕಾಲದ ಪೀಠವು ಹೈಕೋರ್ಟ್ ಆದೇಶವನ್ನು ಬದಿಗಿರಿಸಿದ್ದು, ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಯುಪಿಪಿಎಸ್‌ಸಿಗೆ ಅನುವು ಮಾಡಿಕೊಟ್ಟಿದೆ. ಪ್ರಿಲಿಮಿನರಿ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಲ್ಲಹಾಬಾದ್ ಹೈಕೋರ್ಟ್‌ಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಉತ್ತರ ಪತ್ರಿಕೆಗಳ ಮರುವೌಲ್ಯಮಾಪನ ನಡೆಸಬೇಕೆಂದು ಹೈಕೋರ್ಟ್ ಸೂಚನೆ ನೀಡಿತ್ತು. ಇದೀಗ ಸುಪ್ರೀಂಕೋರ್ಟ್ ಈ ಆದೇಶವನ್ನು ಬದಿಗಿರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News