×
Ad

ಮಹಾರಾಷ್ಟ್ರದಲ್ಲಿ ಏಕಾಏಕಿ ಪೆಟ್ರೋಲ್ ಲೀ.ಗೆ 9 ರೂ. ಕಡಿತ!

Update: 2018-06-14 22:52 IST

ಮುಂಬೈ, ಜೂ.14: ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಜೂ.14ರಂದು 50ನೇ ಜನ್ಮದಿನೋತ್ಸವ ಆಚರಿಸಿದ್ದು ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಆಯ್ದ ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಲೀಟರ್‌ಗೆ 9 ರೂ. ಕಡಿಮೆ ದರದಲ್ಲಿ ಪೆಟ್ರೋಲ್ ಮಾರಾಟ ಮಾಡಲಾಗಿದೆ.

 ಗುರುವಾರ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ತುಂಬಿಸುವವರಿಗೆ ಅಚ್ಚರಿ ಕಾದಿತ್ತು. ಮಹಾರಾಷ್ಟ್ರದ ಜನತೆಗೆ ಎಂಎನ್‌ಎಸ್ ಕಾರ್ಯಕರ್ತರು ಸೂಚನೆ ನೀಡಿದ್ದ ಕಾರಣ ಗುರುವಾರ ಬೆಳಿಗ್ಗಿನಿಂದಲೇ ಪೆಟ್ರೋಲ್ ಬಂಕ್‌ಗಳಲ್ಲಿ ದ್ವಿಚಕ್ರ ವಾಹನಗಳ ಮಾರುದ್ದದ ಸರತಿ ಸಾಲು ಉಂಟಾಗಿದೆ. ಗುರುವಾರ ಬೆಳಿಗ್ಗೆ 8:00 ಗಂಟೆಯಿಂದ ಮಧ್ಯಾಹ್ನದವರೆಗೆ ಈ ಕೊಡುಗೆ ಚಾಲ್ತಿಯಲ್ಲಿತ್ತು. ಮುಂಬೈಯ ಶಿವಾಡಿ ವಿಧಾನಸಭಾ ಕ್ಷೇತ್ರದಲ್ಲಿ ಪೆಟ್ರೋಲ್ ಬೆಲೆಯಲ್ಲಿ ಪ್ರತೀ ಲೀಟರ್‌ಗೆ 9 ರೂ. ಕಡಿತ ಮಾಡಲಾಗಿದ್ದರೆ, ರಾಜ್ಯದ ಇತರ ಆಯ್ದ ಪೆಟ್ರೋಲ್ ಬಂಕ್‌ಗಳಲ್ಲಿ 4ರಿಂದ 5 ರೂ. ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ಲಭ್ಯವಾಗಿದೆ. ಈ ಕೊಡುಗೆಯ ಲಾಭ ಪಡೆದ ಹಲವು ಗ್ರಾಹಕರು ವಾಹನದ ಟ್ಯಾಂಕ್ ಭರ್ತಿ ಪೆಟ್ರೋಲ್ ತುಂಬಿಸಿಕೊಂಡಿದ್ದಾರೆ.

ತೈಲೋತ್ಪನ್ನ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರದ ಬಿಜೆಪಿ ಸರಕಾರ ವಿಫಲವಾಗಿದೆ ಎಂದು ಠಾಕ್ರೆ ನಿರಂತರ ಟೀಕಿಸುತ್ತಾ ಬಂದಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜನಸಾಮಾನ್ಯರ ಬವಣೆಯ ಬಗ್ಗೆ ನಿರ್ಲಕ್ಷ ತೋರಿದ್ದಾರೆ ಎಂದು ಬಿಂಬಿಸುವ ಕಾರ್ಟೂನನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News