ಮಹಿಳೆಯರು ರಕ್ತದಾನ ಮಾಡುವ ಕುರಿತು ತಪ್ಪುಕಲ್ಪನೆ ಸಲ್ಲ: ಜಿಲ್ಲಾಧಿಕಾರಿ ಪ್ರಿಯಾಂಕ
ಉಡುಪಿ, ಜೂ.14: ಕೇವಲ ಸಂಪತ್ತು ಇದ್ದವರು ಮಾತ್ರ ದಾನ ಮಾಡಲು ಆಗುವುದಲ್ಲ. ಆರೋಗ್ಯವಂತರಾಗಿದ್ದವರು ಕೂಡ ತಮ್ಮ ದೇಹದಲ್ಲಿರುವ ರಕ್ತ ವನ್ನು ದಾನ ಮಾಡಬಹುದಾಗಿದೆ. ಈ ದಾನವು ಎಲ್ಲಕ್ಕಿಂತಲೂ ಶ್ರೇಷ್ಠವಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಉಡುಪಿ, ಕರಾವಳಿ ಸ್ವಯಂ ಪ್ರೇರಿತ ರಕ್ತದಾನಿಗಳ ಸಂಘ ಗಂಗೊಳ್ಳಿ, ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರ ಹಾಗೂ ಮಣಿಪಾಲ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಮಣಿಪಾಲ ಪ್ರಗತಿನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಲಾದ ವಿಶ್ವ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಹಿಳೆಯರು ರಕ್ತದಾನ ಮಾಡುವ ಕುರಿತು ಹಲವು ತಪ್ಪು ಕಲ್ಪನೆಗಳಿವೆ. ಇಂತಹ ಯಾವುದೇ ತಪ್ಪು ಕಲ್ಪನೆಗೆ ಯಾರು ಕೂಡ ಕಿವಿಗೊಡಬಾರದು. ಆರೋಗ್ಯವಂತ ಮಹಿಳೆ ಸೇರಿದಂತೆ ಎಲ್ಲ ವ್ಯಕ್ತಿಗಳು ರಕ್ತದಾನ ಮಾಡಬಹು ದಾಗಿದೆ. ಈ ಮೂಲಕ ಹಲವು ವ್ಯಕ್ತಿಗಳ ಜೀವ ಉಳಿಸಲು ಾಧ್ಯವಿದೆ ಎಂದು ಅವರು ತಿಳಿಸಿದರು.
ಸರಕಾರಿ ನೌಕರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಮಾತನಾಡಿ, ಜಿಲ್ಲಾಸ್ಪತ್ರೆಯ ರಕ್ತನಿಧಿಯಿಂದ ಪಡೆದ ರಕ್ತವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯವರು ಸ್ವೀಕರಿಸುತ್ತಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ರೀತಿಯಲ್ಲೂ ರಕ್ತ ಪರೀಕ್ಷೆ ಮಾಡಿದ್ದರೂ ಕೂಡ ಬೇರೆ ಆಸ್ಪತ್ರೆಯವರು ಯಾಕೆ ಪಡೆದುಕೊಳ್ಳು ತ್ತಿಲ್ಲ ಎಂದು ತಿಳಿಯುತ್ತಿಲ್ಲ. ಆದುದರಿಂದ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಯಾವುದೇ ಆಸ್ಪತ್ರೆಯ ರಕ್ತವನ್ನು ಪ್ರತಿಯೊಂದು ಆಸ್ಪತ್ರೆಯಲ್ಲೂ ಸ್ವೀಕರಿ ಸುವಂತೆ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ವಹಿಸಿದ್ದರು. ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಜಗದೀಶ್, ಸಂಸ್ಥೆಯ ಐಎಂಸಿ ಅಧ್ಯಕ್ಷ ವಿಶ್ವನಾಥ ಭಟ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು, ಕರಾವಳಿ ಸ್ವಯಂ ಪ್ರೇರಿತ ರಕ್ಷದಾನಿಗಳ ಸಂಘದ ಅಧ್ಯಕ್ಷ ದಿವಾಕರ ಖಾರ್ವಿ ಉಪಸ್ಥಿತರಿದ್ದರು.
ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ವೀಣಾ ಕುಮಾರಿ ರಕ್ತದಾನದ ಮಹತ್ವ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ಸ್ವಾಗತಿಸಿದರು.
ಮಹಿಳೆ ಸಹಿತ ಐವರು ರಕ್ತದಾನಿಗಳಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಹಲವು ಬಾರಿ ರಕ್ತದಾನ ಮಾಡಿದ ಐವರು ರಕ್ತದಾನಿ ಗಳನ್ನು ಗುರುತಿಸಿ ಸನ್ಮಾನ ಮಾಡಲಾಯಿತು. ಇದರಲ್ಲಿ 32 ಬಾರಿ ರಕ್ತದಾನ ಮಾಡಿದ ಕುಸುಮಾ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಉಳಿದಂತೆ ಅಶೋಕ ಶೆಟ್ಟಿ(50 ಬಾರಿ), ರಮೇಶ್ ಸುವರ್ಣ(30 ಬಾರಿ), ಸಂಪತ್ ಕುಮಾರ್(15 ಬಾರಿ), ಸತ್ತಾರ್ ಹಾಗೂ ಸುಲೇಮಾನ್ ಅವರನ್ನು ಸನ್ಮಾನಿಸಲಾಯಿತು.
‘ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸಬಹುದು. ನನಗೆ ಇದರಲ್ಲಿ ಆತ್ಮ ಸಂತೃಪ್ತಿ ಸಿಕ್ಕಿದೆ ಹೊರತು ಯಾವುದೇ ಹೆದರಿಕೆ ಆಗುತ್ತಿಲ್ಲ’ ಎಂದು ಸನ್ಮಾನ ಸ್ವೀಕರಿಸಿದ ಕುಸುಮಾ ಹೇಳಿದರು. ‘50ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ ನನಗೆ ಆರು ತಿಂಗಳ ಹಿಂದೆ ಮಧುಮೇಹ ಕಾಯಿಲೆ ಇರುವುದು ಪತ್ತೆಯಾ ಯಿತು. ಇದರಿಂದ ಈಗ ರಕ್ತದಾನ ಮಾಡಲು ಆಗುತ್ತಿಲ್ಲ. ತುಂಬಾ ಬೇಸರ ಆಗುತ್ತಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದೆ ಬರಬೇಕು’ ಎಂದು ಅಶೋಕ್ ಶೆಟ್ಟಿ ತಿಳಿಸಿದರು.