×
Ad

ಎ.ಜೆ.ಆಸ್ಪತ್ರೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಸಪ್ತಾಹಕ್ಕೆ ಚಾಲನೆ

Update: 2018-06-14 23:18 IST

ಮಂಗಳೂರು, ಜೂ.14: ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಸಪ್ತಾಹಕ್ಕೆ ಗುರುವಾರ ಚಾಲನೆ ನೀಡಲಾಯಿತು. ಈ ಸಂದರ್ಭ ಎ.ಜೆ. ಆರೋಗ್ಯ ಕಾರ್ಡ್ ಬಿಡುಗಡೆಗೊಳಿಸಲಾಯಿತು. ಅಲ್ಲದೆ ಎ.ಜೆ.ರಕ್ತ ನಿಧಿಗೆ ಮಂಗಳೂರಿನಲ್ಲಿ ಮೊದಲನೇ ಅತ್ಯಾಧುನಿಕ ಯಂತ್ರವನ್ನು ಉದ್ಘಾಟಿಸಲಾಯಿತು.

ಎ.ಜೆ. ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಆರೋಗ್ಯ ಕಾರ್ಡ್ ಬಿಡುಗಡೆಗೊಳಿಸಿ ಪ್ರತೀ ಎರಡು ಸೆಕೆಂಡ್‌ಗಳಿಗೆ ರಕ್ತದ ಅವಶ್ಯಕತೆ ಬರುತ್ತದೆ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಆಗುವುದಿಲ್ಲ. ಆದ್ದರಿಂದ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದ.ಕ. ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಬದ್ರುದ್ದೀನ್ ರಕ್ತದಾನ ಮಾಡುವುದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಎ.ಜೆ.ಆಸ್ಪತ್ರೆಯ ರಕ್ತ ನಿಧಿ ಸಹಯೋಗದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡು ರಕ್ತ ಸಂಗ್ರಹಿಸಿ ಅವಶ್ಯಕತೆ ಇರುವವರಿಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ಮುಂಬೈಯ ಆರ್ಥೋ ಕ್ಲಿನಿಕಲ್ ಡಯಾಗ್ನನೊಸ್ಟಿಕ್ಸ್‌ನ ಜನರಲ್ ಮ್ಯಾನೇಜರ್ ಕೃಷ್ಣಮೂರ್ತಿ ಮುಖ್ಯ ಅತಿಥಿಯಾಗಿದ್ದರು. ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ದಿಕ್ಸೂಚಿ ಭಾಷಣಗೈದರು. ಎ.ಜೆ. ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಡೀನ್ ಡಾ.ಅಶೋಕ್ ಹೆಗ್ಡೆ ಶುಭ ಹಾರೈಸಿದರು.

ಮುಂಬೈ ಬ್ಲಡ್ ಗ್ರೂಪ್ ಡೋನರ್‌ನ ಸುಹಾಸ್ ಹೆಗ್ಡೆ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬ್ಲಡ್ ಬ್ಯಾಂಕ್ ಅಧಿಕಾರಿ ಡಾ.ಅರವಿಂದ ಸ್ವಾಗತಿಸಿದರು. ಕ್ವಾಲಿಟಿ ಆ್ಯಂಡ್ ಟೆಕ್ನಿಕಲ್ ಮೆನೇಜರ್ ಪಿ.ಆರ್. ಗೋಪಾಲಕೃಷ್ಣ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News