ಮಂಗಳೂರು ಸ್ಮಾರ್ಟ್ ಸಿಟಿಗೆ ತ್ಯಾಜ್ಯ ವಿಲೇವಾರಿ ಸಮಸ್ಯೆ!

Update: 2018-06-15 10:20 GMT

ಮಂಗಳೂರು, ಜೂ.15: ಸ್ಮಾರ್ಟ್ ಸಿಟಿಯಾಗಿ ಮಂಗಳೂರು ಘೋಷಣೆಯಾಗಿದ್ದರೂ ತ್ಯಾಜ್ಯ ವಿಲೇವಾರಿಯ ಸಮಸ್ಯೆ ಮಾತ್ರ ನಗರಕ್ಕೆ ಭಾರೀ ತಲೆನೋವಾಗಿ ಪರಿಣಮಿಸುತ್ತಿದೆ. ನಗರದ ಕಸ ವಿಲೇವಾರಿಗೆ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್‌ಗೆ ಗುತ್ತಿಗೆ ನೀಡಲಾಗಿದ್ದರೂ, ಹಲವಾರು ಸಮಸ್ಯೆಗಳನ್ನು ಮುಂದಿಟ್ಟು ಆಗಾಗ್ಗೆ ಪ್ರತಿಭಟನೆ ನಡೆಸುವ ಮೂಲಕ ಸಾರ್ವಜನಿಕರು ಪರಿತಪಿಸುವಂತಾಗಿದೆ.

ಕಸ ಸಂಗ್ರಹ ನಡೆಸುತ್ತಿರುವ ಕಾರ್ಮಿಕರಿಗೆ ವೇತನ ಪಾವತಿ ಮಾಡಿಲ್ಲ ಎಂದು ಆರೋಪಿಸಿ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್‌ನ ಕಾರ್ಮಿಕರು ಗುರುವಾರದಿಂದ ಕಸ ಸಂಗ್ರಹ ನಡೆಸದೆ, ಪ್ರತಿಭಟಿಸುತ್ತಿದ್ದು, ಶುಕ್ರವಾರವೂ ಪ್ರತಿಭಟನೆ ಮುಂದುವರಿಸಿದ್ದಾರೆ. ಇದರಿಂದಾಗಿ ಇಂದು ಕೂಡಾ ಮನೆಯ ಎದುರು, ಕಚೇರಿ ಹಾಗೂ ಸಂಸ್ಥೆಗಳ ಎದುರು ಮಾತ್ರವಲ್ಲದೆ ಕೆಲವೆಡೆ ಕಸದ ತೊಟ್ಟಿಗಳಲ್ಲಿ ಕಸದ ರಾಶಿ ಸಾರ್ವಜನಿಕರಿಗೆ ನಡೆದಾಡಲಾಗದ ಪರಿಸ್ಥಿತಿಯನ್ನು ಸೃಷ್ಟಿಸಿದೆ.

ನಗರದ ವಿವಿಧ ಕಡೆ ಮನೆ, ಕಚೇರಿಗಳ ಎದುರು ಇರಿಸಲಾಗಿದ್ದ ಕಸ ತುಂಬಿದ ಪ್ಲಾಸ್ಟಿಕ್ ಚೀಲಗಳನ್ನು ಬೀದಿ ನಾಯಿಗಳು ಹರಿದು ರಸ್ತೆಯಲ್ಲೆಲ್ಲಾ ಚೆಲ್ಲಿವೆ. ಮಳೆ ಕೂಡಾ ಸುರಿಯುತ್ತಿರುವುದರಿಂದ ಮನೆಯ ಅಡುಗೆ ಮನೆ ತ್ಯಾಜ್ಯ ನೀರಿನ ಜತೆ ಸೇರಿ ರಸ್ತೆಯಲ್ಲೆಲ್ಲಾ ಗಬ್ಬು ನಾತ ಬೀರಲಾರಂಭಿಸಿದೆ.

 ‘ಎಲ್ಲಾ ಕಾರ್ಮಿಕರಿಗೆ ಮಾಸಿಕ ವೇತನ ಸಮರ್ಪಕವಾಗಿ ನೀಡುವವರೆಗೆ ನಾವು ಕೆಲಸಕ್ಕೆ ಹಾಜರಾಗುವುದಿಲ್ಲ’ ಎಂದು ಆ್ಯಂಟನಿ ಸಂಸ್ಥೆಯ ಪ್ರತಿಭಟನಾನಿರತ ಕಾರ್ಮಿಕರು ತಿಳಿಸಿದರೆ, ‘ಆ್ಯಂಟನಿ ಸಂಸ್ಥೆಗೆ ಮನಪಾ ವತಿಯಿಂದ ಪಾವತಿಸಲು ಬಾಕಿ ಇರುವ 2.10 ಕೋ.ರೂ.ಗಳನ್ನು ಗುರುವಾರ ಮಧ್ಯಾಹ್ನವೇ ನೀಡಲಾಗಿದ್ದು, ಇದರಿಂದಾಗಿ ಶುಕ್ರವಾರದಿಂದ ಕಸ ಸಂಗ್ರಹ ಎಂದಿನಂತೆ ಆರಂಭವಾಗಲಿದೆ’ ಎಂದು ಮಂಗಳೂರು ಪಾಲಿಕೆ ತಿಳಿಸಿತ್ತು. ಆದರೆ ಇಂದು ಈವರೆಗೂ ತ್ಯಾಜ್ಯ ವಿಲೇವಾರಿ ನಡೆದಿಲ್ಲ.

ಮಂಗಳೂರು ಪಾಲಿಕೆ ಹಾಗೂ ಕಸ ವಿಲೇವಾರಿಯ ಗುತ್ತಿಗೆ ವಹಿಸಿಕೊಂಡಿರುವ ಆ್ಯಂಟನಿ ವೇಸ್ಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ನಡುವಿನ ಬಿಕ್ಕಟ್ಟಿನಿಂದಾಗಿ ಗುತ್ತಿಗೆ ಕಾರ್ಮಿಕರಿಗೆ ಸಂಬಳ ಸಿಗದೆ ಕಾರ್ಮಿಕರು ಮುಷ್ಕರ ನಡೆಸಿರುವುದು ಇದೇ ಮೊದಲಲ್ಲ. ಕಳೆದ ವರ್ಷ ನವೆಂಬರ್‌ನಲ್ಲೂ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಎರಡು ದಿನ ಕಾರ್ಮಿಕರು ಕಸ ವಿಲೇವಾರಿ ನಡೆಸದೆ, ಪ್ರತಿಭಟಿಸಿದ್ದರು. 2016ರಲ್ಲೂ ಇದೇ ರೀತಿ ಕಾರ್ಮಿಕರು ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ಕಸ ಸಂಗ್ರಹ ವ್ಯತ್ಯಯವಾಗಿತ್ತು. ಇನ್ನೂ ಕೆಲವು ಸಂದರ್ಭದಲ್ಲಿ ಇಂತಹುದೇ ಪ್ರತಿಭಟನೆ ನಡೆದಿತ್ತು. ವೇತನ ಪಾವತಿಯಾಗಿಲ್ಲ ಎಂದು ಆರೋಪಿಸಿ ಕಾರ್ಮಿಕರು ಮುಷ್ಕರ ನಡೆಸುತ್ತಿರುವುದನ್ನು ಅರಿತು ಕೊನೆ ಘಳಿಗೆಯಲ್ಲಿ ಮಂಗಳೂರು ಪಾಲಿಕೆಯು ಮಧ್ಯಪ್ರವೇಶಿಸಿ ಬಾಕಿ ಹಣ ಪಾವತಿಗೆ ಮುಂದಾಗುತ್ತದೆ. ಇವೆಲ್ಲದರ ಮಧ್ಯೆ, ಸಂಕಷ್ಟ ಅನುಭವಿಸಬೇಕಾದವರು ಮಾತ್ರ ಸಾರ್ವಜನಿಕರು ಎಂಬುದು ವಾಸ್ತವ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News