×
Ad

ಎಲ್ಲಾ ಬಂಧಿತ ಆರೋಪಿಗಳ ನ್ಯಾಯಾಂಗ ಬಂಧನ 28ಕ್ಕೆ ವಿಸ್ತರಣೆ

Update: 2018-06-15 16:10 IST

ಉಡುಪಿ, ಜೂ.15: ಮಂಗಳೂರು ಜೋಕಟ್ಟೆಯ ದನದ ವ್ಯಾಪಾರಿ ಹುಸೇನಬ್ಬ(62) ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಹಿರಿಯಡ್ಕ ಎಸ್ಸೈ ಡಿ.ಎನ್.ಕುಮಾರ್ ಸೇರಿದಂತೆ 11 ಮಂದಿ ಆರೋಪಿಗಳ ನ್ಯಾಯಾಂಗ ಬಂಧನವನ್ನು ಉಡುಪಿಯ ನ್ಯಾಯಾಲಯ ಇಂದು ಜೂ.28ರವರೆಗೆ ವಿಸ್ತರಿಸಿ ಆದೇಶ ನೀಡಿದೆ.

ಮೇ 30ರಂದು ಹಿರಿಯಡ್ಕ ಸಮೀಪದ ಶೇನರಬೆಟ್ಟಿನಲ್ಲಿ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಪ್ರಮುಖ ಆರೋಪಿ ಸುರೇಶ್ ಮೆಂಡನ್ ಯಾನೆ ಸೂರಿ ಸೇರಿದಂತೆ ಏಳು ಮಂದಿಯನ್ನು ಕಾರವಾರ ಜೈಲಿನಿಂದ ಹಾಗೂ ಇನ್ನೋವರ್ ಆರೋಪಿ ದೀಪಕ್ ಹೆಗ್ಡೆಯನ್ನು ಮಂಗಳೂರು ಜೈಲಿನಿಂದ ಬಿಗುಪೊಲೀಸ್ ಬಂದೋಬಸ್ತ್‌ನಲ್ಲಿ ಕರೆತಂದು ಉಡುಪಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯದ ನ್ಯಾಯಾಧೀಶ ವಿ.ಎಸ್. ಪಂಡಿತ್ ಮುಂದೆ ಹಾಜರು ಪಡಿಸಲಾಯಿತು.

ಆದರೆ ಕಾರವಾರ ಜೈಲಿನಲ್ಲೇ ಇರುವ ಎಸ್ಸೈ ಸಹಿತ ಮೂವರು ಪೊಲೀಸರನ್ನು ವೈದ್ಯಕೀಯ ಕಾರಣಗಳಿಗಾಗಿ ಇಂದು ಕಾರವಾರದಿಂದ ಕರೆತಂದಿರಲಿಲ್ಲ. ಅವರು ಕಾರವಾರದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಂಗಳೂರು ಕಾರಾಗೃಹದಲ್ಲಿರುವ ಪೆರ್ಡೂರಿನ ದೀಪಕ್ ಹೆಗ್ಡೆ, ಈ ಪ್ರಕರಣದಲ್ಲಿ ಜಾನುವಾರಗಳ ಮಾರಾಟದಲ್ಲಿ ಭಾಗಿಯಾಗಿದ್ದಲ್ಲದೇ ಬಳಿಕ ಮಾಹಿತಿಯನ್ನು ಆರೋಪಿಗಳೊಂದಿಗೆ ಹಂಚಿಕೊಂಡು ಹುಸೇನಬ್ಬ ಕೊಲೆ ಪ್ರಕರಣದಲ್ಲೂ ಒಳಗೊಂಡು ಬಂಧಿತರಾಗಿದ್ದರು.ದೀಪಕ್ ಹೆಗ್ಡೆ ಅವರನ್ನು ಅವರಿರುವ ಮಂಗಳೂರು ಕಾರಾಗೃಹದಿಂದ ಕರೆತಂದು ನ್ಯಾಯಾಲಯ ಎದುರು ಹಾಜರು ಪಡಿಸಲಾಯಿತು.

ವಿಚಾರಣೆ ನಡೆಸಿದ ನ್ಯಾಯಾಧೀಶ ವಿ.ಎಸ್.ಪಂಡಿತ್, ಮೂವರು ಪೊಲೀಸರು ಸೇರಿದಂತೆ ಒಟ್ಟು 11 ಮಂದಿಯ ನ್ಯಾಯಾಂಗ ಬಂಧನವನ್ನು ಜೂ.28ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದರು. ಬಳಿಕ ಬಿಗುಪೊಲೀಸ್ ಬಂದೋಬಸ್ತ್‌ನಲ್ಲಿ ಏಳು ಮಂದಿಯನ್ನು ಕಾರವಾರ ಕಾರಾಗೃಹ ಹಾಗೂ ದೀಪಕ್ ಹೆಗ್ಡೆ ಅವರನ್ನು ಮಂಗಳೂರು ಕಾರಾಗೃಹಕ್ಕೆ ಕರೆದೊಯ್ಯಲಾಯಿತು.

ಆರೋಪಿಗಳನ್ನು ಕೋರ್ಟ್‌ಗೆ ತರುವ ಹಿನ್ನೆಲೆಯಲ್ಲಿ ಆರೋಪಿಗಳ ಕುಟುಂಬಿಕರು, ಸ್ನೇಹಿತರು ಕೋರ್ಟ್ ಆವರಣದಲ್ಲಿ ಉಪಸ್ಥಿತರಿದ್ದು, ತಮ್ಮವರನ್ನು ನೋಡುವ, ಮಾತನಾಡಲು ಪ್ರಯತ್ನ ನಡೆಸಿದರು. ಅವರುಗಳ ಕಣ್ಣೀರು ಹಲವು ಕತೆಗಳನ್ನು ಸಾರುತಿದ್ದವು.

18ಕ್ಕೆ ಜಾಮೀನು ಅರ್ಜಿ ವಿಚಾರಣೆ

ಈ ನಡುವೆ ಪ್ರಕರಣದಲ್ಲಿ ಬಂಧಿತ ಆರೋಪಿಗಳಾದ ಪೊಲೀಸ್ ಎಸ್ಸೈ ಡಿ.ಎನ್.ಕುಮಾರ್, ಪೊಲೀಸ್ ಸಿಬ್ಬಂದಿಗಳಾದ ಮೋಹನ್ ಕೊತ್ವಾಲ್, ಗೋಪಾಲ, ವಿಎಚ್‌ಪಿ ಮುಖಂಡ ಸುರೇಶ್ ಮೆಂಡನ್, ಬಜರಂಗದಳ ಕಾರ್ಯಕರ್ತರಾದ ಪ್ರಸಾದ್ ಮರಕಾಲ, ಉಮೇಶ್ ಶೆಟ್ಟಿ, ರತನ್ ಪೂಜಾರಿ, ಚೇತನ್ ಆಚಾರ್ಯ, ಶೈಲೇಶ್ ಶೆಟ್ಟಿ, ಗಣೇಶ್ ನಾಯ್ಕರ ಜಾಮೀನು ಅರ್ಜಿ ಕುರಿತ ತೀರ್ಪು ಜೂ.18ರ ಸೋಮವಾರ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಹೊರಬೀಳಲಿದೆ.

ಇವರೆಲ್ಲರ ಜಾಮೀನು ಅರ್ಜಿಯ ವಿಚಾರಣೆಯನ್ನು ಗುರುವಾರ ನಡೆಸಿರುವ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಟಿ. ಅವರು ತೀರ್ಪನ್ನು ಜೂ.18ಕ್ಕೆ ಕಾದಿರಿಸಿದ್ದಾರೆ.ನಿನ್ನೆ ನ್ಯಾಯಾಲಯದ ಎದುರು ಸಲ್ಲಿಸಲಾದ ಪೋಸ್ಟ್‌ಮಾರ್ಟಂ ವರದಿಯಲ್ಲಿ ಹುಸೇನಬ್ಬರ ಸಾವಿಗೆ ತಲೆಗಾದ ಗಾಯವೇ ಕಾರಣವೆಂದು ಸ್ಪಷ್ಟವಾಗಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News