×
Ad

ಈದುಲ್ ಫಿತ್ರ್: ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ‘ಹಸಿರು ಕೂಟ’

Update: 2018-06-15 19:51 IST

ಉಡುಪಿ, ಜೂ.15: ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ವತಿಯಿಂದ ಶುಕ್ರವಾರ ಈದುಲ್ ಫಿತ್ರ್ ಹಬ್ಬದ ಪ್ರಯುಕ್ತ ಹಸಿರು ಗಿಡಗಳನ್ನು ನೀಡುವ ಮೂಲಕ ಹಬ್ಬದ ಶುಭಾಶಯ ಕೋರುವ ವಿಶಿಷ್ಟ ಕಾರ್ಯಕ್ರಮವನ್ನು ನಗರದ ಜಾಮೀಯಾ ಸಮೀದಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

‘ಹಸಿರು ಕೂಟ’ ಎಂಬ ಭಾವೈಕ್ಯತೆಯನ್ನು ಪ್ರತಿಬಿಂಬಿಸುವ ಈ ಕಾರ್ಯಕ್ರಮದಲ್ಲಿ ಈದ್ ಪ್ರಾರ್ಥನೆ ಸಲ್ಲಿಸಿ ಮಸೀದಿಯಿಂದ ಹೊರಬರುವವರಿಗೆ, ಸಮಿತಿಯ ಸದಸ್ಯರು ಗಿಡ ನೀಡಿ  ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಸಮಿತಿಯ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ವಿನಯಚಂದ್ರ ಸಾಸ್ತಾನ ಅವರು ಈ ಉಡುಗೊರೆ ನೀಡಿದಾಗ ಮುಸ್ಲಿಮರು ಪ್ರೀತಿಯ ಅಪ್ಪುಗೆಯ ಮೂಲಕ ಅವರನ್ನು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಮಾವು, ಹಲಸು, ಬಿಲ್ಲಪತ್ರೆ, ಚಂದ್ರಪ್ರಭ, ಕಹಿಬೇವು, ನೀಲಪುಷ್ಪ, ಬಾದಾಮಿ, ಚೆರ್ರಿ, ಬಡ್ಡುಪುಳಿ, ನೇರಳೆ, ನೆಲ್ಲಿಕಾಯಿ ಮೊದಲಾದ 300ಕ್ಕೂ ಅಧಿಕ ಉಪಯುಕ್ತ ಗಿಡಗಳನ್ನು ಉಚಿತವಾಗಿ ವಿತರಿಸಲಾಯಿತು. ಗಿಡಗಳನ್ನು ನೆಟ್ಟು, ಜೋಪಾನವಾಗಿ ನೋಡಿಕೊಂಡು ಬೆಳೆಸುವ ಭರವಸೆಯ ಮಾತುಗಳನ್ನು ಗಿಡ ಸ್ವೀಕರಿಸಿದವರು ಆಡಿದರು.

ಗಣ್ಯರಾದ ಮಹಮ್ಮದ್ ಮೌಲ, ವಿ.ಎಸ್.ಉಮರ್, ಖಾಲಿದ್ ಅಬ್ದುಲ್ ಅಝೀದ್, ಶಾಹಿದ್ ಅಲಿ, ಮುಹಮ್ಮದ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಬ್ಬದ ಸಂದರ್ಭದಲ್ಲಿ ಹಸಿರು ಪ್ರಜ್ಞೆ, ಪರಿಸರ ಪ್ರಜ್ಞೆಯೊಂದಿಗೆ ಸೌಹಾರ್ದತೆ ಆಚರಣೆಗೆ ಮುಂದಾದ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಈ ವಿನೂತನ ಕಾರ್ಯಕ್ರಮ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News