ವಿಶ್ವಕಪ್: ಇರಾನ್‌ಗೆ ಗೆಲುವಿನ ಗಿಫ್ಟ್ ಕೊಟ್ಟ ಮೊರಾಕ್ಕೊ ಆಟಗಾರ!

Update: 2018-06-16 05:39 GMT

ಸೈಂಟ್ ಪೀಟರ್ಸ್‌ಬರ್ಗ್, ಜೂ.15: ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದ ಅಝೀಝ್ ಬುಹಾದೂಝ್ ಶುಕ್ರವಾರ ಮೊರಾಕ್ಕೊ ಪಾಲಿಗೆ ಖಳನಾಯಕನಾದರು.

  ವಿಶ್ವಕಪ್ ಫುಟ್ಬಾಲ್ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಮೊರಾಕ್ಕೊದ ಅಝೀಝ್ ಇಂಜುರಿ ಟೈಮ್‌ನಲ್ಲಿ ತಮ್ಮದೇ ತಂಡದ ಗೋಲು ಪೆಟ್ಟಿಗೆಯೊಳಗೆ ಚೆಂಡನ್ನು ಹಾಕುವ ಮೂಲಕ ಇರಾನ್ ತಂಡಕ್ಕೆ 1-0 ಅಂತರದ ಗೆಲುವು ತಂದುಕೊಟ್ಟರು.

ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದ ಇರಾನ್ ಹಾಗೂ ಮೊರೊಕ್ಕೊ ತಂಡಗಳು ತೀವ್ರ ಪೈಪೋಟಿ ನಡೆಸಿದ್ದು ನಿಗದಿತ 90 ನಿಮಿಷಗಳ ಆಟದಲ್ಲಿ ಎರಡೂ ತಂಡಗಳಿಗೆ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಆಗ ಇಂಜುರಿ ಟೈಮ್‌ಗೆ ಪಂದ್ಯ ಮುಖ ಮಾಡಿತು. ಹೆಚ್ಚುವರಿ ಸಮಯದಲ್ಲಿ(90+5ನೇ ನಿಮಿಷ)ಅಝೀಝ್ ಮಾಡಿದ ಎಡವಟ್ಟು ಮೊರೊಕ್ಕೊ ಪಾಲಿಗೆ ಮುಳುವಾಯಿತು.

‘ಬಿ’ ಗುಂಪಿನ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಇರಾನ್ ಮೂರಂಕವನ್ನು ಪಡೆದಿದೆ. ಸ್ಪೇನ್ ಹಾಗೂ ಪೋರ್ಚುಗಲ್ ನಾಕೌಟ್ ಹಂತಕ್ಕೇರುವ ಫೇವರಿಟ್ ತಂಡಗಳಾಗಿರುವ ಕಾರಣ ಇರಾನ್‌ಗೆ ಮುಂದಿನ ಸುತ್ತಿಗೇರಲು ಅಲ್ಪ ಅವಕಾಶವಿದೆ. ಇರಾನ್ ತಂಡದ ಆಟಗಾರ ಇಹ್ಸಾನ್ ಹಜ್ಸಾಫಿ ಫ್ರೀ ಕಿಕ್‌ನಲ್ಲಿ ಒದ್ದ ಚೆಂಡನ್ನು ತಡೆಯಲು ಅಝೀಝ್ ಮುಂದಾದರು. ಆದರೆ, ಅಝೀಝ್ ತಲೆಗೆ ತಾಗಿದ ಚೆಂಡು ಮಿಂಚಿನ ವೇಗದಲ್ಲಿ ಸಾಗಿ ಅವರದೇ ತಂಡದ ಗೋಲು ಪೆಟ್ಟಿಗೆ ಬಲೆಯೊಳಗೆ ಸೇರಿಕೊಂಡಿತು. ಆಗ ಮೊರಾಕ್ಕೊ ಆಟಗಾರರು ಒಂದು ಕ್ಷಣ ಅವಕ್ಕಾದರು. ಇರಾನ್ ತಂಡದಲ್ಲಿ ಸಂಭ್ರಮ ಉಕ್ಕಿ ಹರಿಯಿತು.

ಇರಾನ್ ಸುಮಾರು 20 ವರ್ಷಗಳ ಬಳಿಕ ವಿಶ್ವಕಪ್‌ನಲ್ಲಿ ಮೊದಲ ಗೆಲುವು ದಾಖಲಿಸಿತು. 1998ರಲ್ಲಿ ಅಮೆರಿಕ ವಿರುದ್ಧ ಕೊನೆಯ ಬಾರಿ ಗೆಲುವು ಸಾಧಿಸಿತ್ತು.

ಮೊರಾಕ್ಕೊ ವಿಶ್ವಕಪ್‌ನಲ್ಲಿ ಎರಡನೇ ಬಾರಿ ತನ್ನದೇ ಗೋಲು ಪೆಟ್ಟಿಗೆಗೆ ಚೆಂಡನ್ನು ಹಾಕಿ ಎಡವಟ್ಟು ಮಾಡಿದೆ. 1998ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಇಂತಹ ತಪ್ಪು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News